ಉತ್ತರ ಭಾರತದಲ್ಲಿ ಪೆಟ್ರೋಲ್ ಪಂಪ್‌ಗಳ ಮುಂದೆ ಮೈಲುದ್ದ ಲೈನ್
ನವದೆಹಲಿ : ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ಉತ್ತರ ಭಾರತದಲ್ಲಿ ಜನರು ಪೆಟ್ರೋಲ್ ಖರೀದಿಗೆ ಮುಗಿಬಿದ್ದಿದ್ದಾರೆ. ಪೆಟ್ರೋಲ್ ಬಂಕ್ಗಳಲ್ಲಿ ಉದ್ದುದ್ದ ಕ್ಯೂ ಇರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆ ದೇಶದಲ್ಲಿ ಇಂಧನ ಸಂಗ್ರಹ ಸಾಕಷ್ಟಿದೆ ಎಂದು ತಿಳಿಸಿದೆ.
ಇಂಡಿಯನ್ ಅಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ಸಂಗ್ರಹ ಇಟ್ಟುಕೊಂಡಿದೆ. ನಮ್ಮ ಸಪ್ಲೈ ಲೈನ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಂಧನ ಖರೀದಿಸುವ ಧಾವಂತ ಬೇಡ. ನಮ್ಮ ಎಲ್ಲ ಬಂಕ್ಗಳಲ್ಲಿ ಇಂಧನ ಮತ್ತು ಎಲ್ಪಿಜಿ ಸಿಗುತ್ತದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಐಒಸಿಎಲ್ ಹೇಳಿದೆ.
ಮೊನ್ನೆಯಿಂದ ಪಾಕಿಸ್ಥಾನ ಭಾರತದ ಗಡಿಭಾಗದ ಪ್ರದೇಶಗಳ ಮೇಲೆ ಕ್ಷಿಪಣಿ, ಡ್ರೋನ್, ಬಾಂಬ್, ಮದ್ದುಗುಂಡುಗಳ ಮೂಲಕ ದಾಳಿ ಮಾಡುತ್ತಿದೆ. ಕಾಶ್ಮೀರ, ಪಂಜಾಬ್, ರಾಜಸ್ಥಾನ ರಾಜ್ಯಗಳಲ್ಲಿ ಪಾಕ್ ಗಡಿ ಬಳಿ ಇರುವ ಪ್ರದೇಶಗಳಲ್ಲಿ ಪಾಕಿಸ್ಥಾನದ ಶೆಲ್ಗಳು ಬಿದ್ದಿವೆ. ಈ ಭಾಗದ ಜನರು ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸತೊಡಗಿದ್ದಾರೆ. ಪೆಟ್ರೋಲ್, ಡೀಸಲ್, ಗ್ಯಾಸ್ ಇತ್ಯಾದಿಯನ್ನೂ ಖರೀದಿಸುತ್ತಿದ್ದಾರೆ.
ಪಂಜಾಬ್ನ ಹಲವು ಭಾಗಗಳಲ್ಲಿ ಜನರು ಪೆಟ್ರೋಲ್ ಖರೀದಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಆಯಿಲ್ ಸಂಸ್ಥೆ ದೇಶದೆಲ್ಲೆಡೆ ಇಂಧನ ಲಭ್ಯತೆ ಇರುತ್ತದೆ ಎಂದು ಸ್ಪಷ್ಟಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದೆ.