ಸ್ಫೋಟದ ಬಿರುಸಿಗೆ ಹಲವು ಮೀಟರ್ ದೂರ ಹಾರಿದ ಸೈನಿಕರ ದೇಹಗಳು
ಇಸ್ಲಾಮಾಬಾದ್ : ಭಾರತ ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ಥಾನಕ್ಕೆ ಎಂದೂ ಮರೆಯಲಾಗದ ಏಟು ಕೊಟ್ಟಿದ್ದರೆ ಇನ್ನೊಂದೆಡೆಯಿಂದ ಬಲೂಚಿಸ್ಥಾನ ಸ್ವಾತಂತ್ರ್ಯ ಹೋರಾಟಗಾರರು ಪಾಕಿಸ್ಥಾನವನ್ನು ಇನ್ನಿಲ್ಲದಂತೆ ಕಾಡಲು ತೊಡಗಿದ್ದಾರೆ. ಪಾಕಿಸ್ಥಾನದ ಸೇನಾ ವಾಹನದ ಮೇಲೆ ಬಲೂಚಿಸ್ಥಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ) ನಡೆಸಿದ ದಾಳಿಯಲ್ಲಿ ಕನಿಷ್ಠ 12 ಮಂದಿ ಪಾಕ್ ಯೋಧರು ಮೃತಪಟ್ಟಿದ್ದಾರೆ. ಐಇಡಿ ಮೂಲಕ ಪಾಕ್ ಸೇನಾ ವಾಹನವನ್ನು ಸ್ಫೋಟಿಸಿರುವುದಾಗಿ ಬಲೂಚಿಸ್ಥಾನ ಸೇನೆ ಹೇಳಿಕೊಂಡಿದೆ.
ಈ ಘಟನೆ ಬಲೂಚಿಸ್ಥಾನದ ಬೋಲಾನ್‌ನಲ್ಲಿ ನಡೆದಿದೆ. ಬಲೂಚ್ ಲಿಬರೇಶನ್ ಆರ್ಮಿಯ ವಿಶೇಷ ಯುದ್ಧತಂತ್ರದ ಕಾರ್ಯಾಚರಣೆ ಸ್ಕ್ವಾಡ್ ಬೋಲನ್‌ನ ಮಾಚ್‌ಕುಂಡ್ ಪ್ರದೇಶದಲ್ಲಿ ರಿಮೋಟ್ ಕಂಟ್ರೋಲ್ ಐಇಡಿಯೊಂದಿಗೆ ಭಾರಿ ಸ್ಫೋಟ ಮಾಡಿ ಪಾಕ್ ಸೈನಿಕರು ಮಿಲಿಟರಿ ಕಾರ್ಯಾಚರಣೆಗೆ ಹೋಗುತ್ತಿದ್ದ ವಾಹನವನ್ನು ಉಡಾಯಿಸಿದೆ.
ಈ ದಾಳಿ ಮಂಗಳವಾರ ನಡೆದಿದ್ದರೂ ದಾಳಿಯ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ವಾಹನದಲ್ಲಿ ತೆರಳುತ್ತಿದ್ದ ಪಾಕಿಸ್ಥಾನಿ ಸೈನಿಕರ ದೇಹಗಳು ಸ್ಫೋಟದ ನಂತರ ಗಾಳಿಯಲ್ಲಿ ಹಲವಾರು ಮೀಟರ್‌ಗಳಷ್ಟು ಹಾರಿರುವುದು ವೀಡಿಯೊದಲ್ಲಿ ಕಾಣಿಸಿದೆ. ಬಲೂಚ್ ಲಿಬರೇಶನ್ ಆರ್ಮಿಯ ಸೈನಿಕರು ಮಾಚ್ ಪ್ರದೇಶದಲ್ಲಿ ಸ್ಫೋಟಕಗಳೊಂದಿಗೆ ಭದ್ರತಾ ಪಡೆ ವಾಹನವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪಾಕಿಸ್ಥಾನ ಸೇನೆ ದಾಳಿಯ ನಂತರ ತಿಳಿಸಿದೆ. ಈ ದಾಳಿಯಲ್ಲಿ ತನ್ನ ಏಳು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಮೊದಲಿಗೆ ಹೇಳಿತ್ತು. ಆದರೆ ನಂತರ ಸಾವಿನ ಸಂಖ್ಯೆ ಹೆಚ್ಚಾಗಿರುವುದು ತಿಳಿದುಬಂದಿದೆ. ಭಯೋತ್ಪಾದಕರ ನಿರ್ಮೂಲನೆಗಾಗಿ ಆ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಪಾಕಿಸ್ಥಾನ ಸೇನೆ ಹೇಳಿಕೊಂಡಿದೆ.
ಬಲೂಚ್ ಆರ್ಮಿ ದಾಳಿಯಲ್ಲಿ ಮೃತಪಟ್ಟವರಲ್ಲಿ ಪಾಕಿಸ್ತಾನ ಸೇನೆಯ ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದ್ದಾರೆ ಎಂದು ಸೇನೆ ತಿಳಿಸಿದೆ. ಕಳೆದ ಕೆಲವು ಸಮಯಗಳಿಂದ ಬಲೂಚಿಸ್ಥಾನದ ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ಥಾನಕ್ಕೆ ಕಠಿಣ ಸವಾಲು ಒಡ್ಡುತ್ತಿದೆ. ಇದೀಗ ಪಾಕಿಸ್ಥಾನದ 12 ಮಂದಿ ಯೋಧರನ್ನು ಹತ್ಯೆ ಮಾಡಿದ ಬಳಿಕ, ನಿಖರ ಗುರಿಯೊಂದಿಗೆ ಇಂತಹ ಇನ್ನಷ್ಟು ದಾಳಿಗಳನ್ನು ನಡೆಸುತ್ತೇವೆ. ಹೆಚ್ಚಿನ ದಾಳಿಗಳನ್ನು ನಡೆಸಲಿದ್ದೇವೆ ಎಂದು ಬಲೂಚ್ ಲಿಬರೇಷನ್ ಆರ್ಮಿ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದೆ.