ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಕಂಗೆಟ್ಟುಹೋದ ಪಾಕಿಸ್ಥಾನಕ್ಕೆ ಸೇಡಿನ ತವಕ
ಇಸ್ಲಾಮಾಬಾದ್: ತನ್ನ ನೆಲದಲ್ಲಿರುವ ಉಗ್ರ ತಾಣಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಕಂಗೆಟ್ಟು ಹೋಗಿರುವ ಪಾಕಿಸ್ಥಾನ ಈಗ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದೆ. ಪಾಕಿಸ್ಥಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ತನ್ನ ದೇಶವಾಸಿಗಳಿಗೆ ಭರವಸೆ ನೀಡಿದ್ದಾರೆ.
ಬುಧವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಷರೀಫ್, ಹಿಂದುಸ್ಥಾನ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಅವರು ಮಾಡಿದ ತಪ್ಪಿಗೆ ಭಾರಿ ಬೆಲೆ ತೆರಬೇಕಾಗುತ್ತದೆ. ಪ್ರತಿ ರಕ್ತದ ಹನಿಗೂ ಸೇಡು ತೀರಿಸಿಕೊಳ್ತೀವಿ. ನಾವು ದೇಶವನ್ನು ರಕ್ಷಿಸಲು ನಮ್ಮ ಕೊನೆಯುಸಿರು ಇರುವವರೆಗೂ ಹೋರಾಡುತ್ತೇವೆ ಎಂದಿದ್ದಾರೆ.
ಪಹಲ್ಗಾಮ್ ದಾಳಿ ನಡೆದಾಗ ನಾನು ಟರ್ಕಿಗೆ ಭೇಟಿ ನೀಡಿದ್ದೆ. ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆಗಲೇ ನಾವು ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ, ತನಿಖೆಗೆ ಸಹಕರಿಸಲೂ ಸಿದ್ಧರಿದ್ದೇವೆ ಎಂದು ಹೇಳಿದ್ದೆವು. ಆದರೆ ಭಾರತ ನಮ್ಮ ಸ್ಪಷ್ಟನೆಯನ್ನು ಸ್ವೀಕರಿಸದೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿ, ಭಾರತದ ದಾಳಿಯನ್ನು ವಿಫಲಗೊಳಿಸಿದ್ದೇವೆ. ಭಾರತದ ದಾಳಿ ಅಚ್ಚರಿ ಮೂಡಿಸಿತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಭಾರತೀಯ ವಿಮಾನಗಳು ತಮ್ಮ ದೇಶವನ್ನು ಪ್ರವೇಶಿಸಿದರೆ ಸಮುದ್ರಕ್ಕೆ ಎಸೆಯಲು ಪಾಕಿಸ್ಥಾನ ವಾಯುಪಡೆ ಸಿದ್ಧವಾಗಿದೆ ಮತ್ತು ಅದಕ್ಕಾಗಿ ಕಾಯುತ್ತಿದೆ. ಪಾಕಿಸ್ಥಾನ 5 ರಫೇಲ್ ಜೆಟ್‌ಗಳು ಮತ್ತು 2 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಹಸಿಹಸಿ ಸುಳ್ಳು ಹೇಳಿದ್ದಾರೆ.