ಪುತ್ತೂರು : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ಹತ್ಯೆಗೆ ಪ್ರತಿಕಾರವಾಗಿ ಬುಧವಾರ ತಡರಾತ್ರಿ ಭಾರತೀಯ ಸೇನೆ ನಡೆಸಿ ಸಿಂಧೂರ ಆಪರೇಷನ್ ನಲ್ಲಿ ಹಲವಾರು ಉಗ್ರರನ್ನು ಹತ್ಯೆಗೈದಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವತಿಯಿಂದ ಭಾರತೀಯ ಸೇನೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಸ್ಥಾನದ ಗರ್ಭಗುಡಿ ಎದುರು ಪ್ರಧಾನ ಅರ್ಚಕ ವಿ.ಎಸ್.ಭಟ್ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಮಹೇಂದ್ರ ವರ್ಮ, ಕಾರ್ಯಕರ್ತರಾದ ಪ್ರಸನ್ನ ಮಾರ್ತ, ಶ್ರೀ ದೇವಸ್ಥಾನದ ಸಂರಕ್ಷಣಾ ಸಮಿತಿಯ ಬಾಲಚಂದ್ರ ಸೊರಕೆ, ಹರಿಪ್ರಸಾದ್ ನೆಲ್ಲಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಮಹಿಳೆಯರ ಸಿಂಧೂರ ಅಳಿಸುವ ಕೆಲಸವನ್ನು ಜಿಹಾದಿ ಮನಸ್ಸಿನ ಉಗ್ರರು ನಡೆಸಿದ್ದು, ಅದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ಉಗ್ರರನ್ನು ಮಟ್ಟ ಹಾಕುವ ಮೂಲಕ ದಿಟ್ಟ ಉತ್ತರ ನೀಡಿದೆ. ಇಂತಹಾ ಕೃತ್ಯಗಳು ದೇಶದಲ್ಲಿ ನಡೆಯಬಾರದು ಎಂಬ ದಿಟ್ಟ ನೆಲೆಯಿಂದ ಪ್ರಧಾನಿ ಮೋದಿಯವರು ಈ ಕುರಿತು ಕ್ರಮ ಕೈಗೊಂಡಿದ್ದಾರೆ. ಭಾರತೀಯ ಸೇನೆ ಹಾಗೂ ಪ್ರಧಾನಿ ಮೋದಿಯವರಿಗೆ ಇನ್ನಷ್ಟು ಶಕ್ತಿಯನ್ನು ಶ್ರೀ ಮಹಾಲಿಂಗೇಶ್ವರ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರು.