ಆಪರೇಷನ್ ಸಿಂಧೂರ್‌ಗೆ ಉಗ್ರನ ನಾಲ್ವರು ಸಹಚರರೂ ಬಲಿ
ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಜೈಶ್- ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್‌ನ ಹತ್ತು ಸಂಬಂಧಿಕರು ಮತ್ತು ನಾಲ್ಕು ಮಂದಿ ಸಹಚರರು ಹತ್ಯೆಯಾಗಿದ್ದಾರೆ. ಈ ವಿಚಾರವನ್ನು ಸ್ವತಹ ಮಸೂದ್ ಅಜರ್ ಹೇಳಿಕೊಂಡಿದ್ದಾನೆಂದು ಬಿಬಿಸಿ ಉರ್ದುವನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಇವರೆಲ್ಲ ಜೈಶ್‌ನ ಕೇಂದ್ರ ಸ್ಥಾನವಾಗಿದ್ದ ಬಹವಾಲ್ಪುರದಲ್ಲಿದ್ದರು. ರಾತ್ರಿ 1.05ಕ್ಕೆ ಕ್ಷಿಪಣಿ ಅಪ್ಪಳಿಸಿದಾಗ ಉಗ್ರ ನೆಲೆ ನಾಶವಾಗಿದ್ದು, ಅದರಲ್ಲಿದ್ದ ಮಸೂದ್ ಅಜರ್‌ನ ಹತ್ತು ಸಂಬಂಧಿಕರು ಮತ್ತು ನಾಲ್ವರು ಸಹಚರರು ಸತ್ತಿದ್ದಾರೆ ಎನ್ನಲಾಗಿದೆ.
ಮಸೂದ್ ಅಜರ್‌ನ ಅಕ್ಕ, ಆಕೆಯ ಗಂಡ, ಮಸೂದ್‌ನ ಅಳಿಯ ಮತ್ತು ಅವನ ಹೆಂಡತಿ, ಓರ್ವ ಸೊಸೆ ಮತ್ತು ಕುಟುಂಬದ ಐವರು ಮಕ್ಕಳು ಸತ್ತಿದ್ದಾರೆ. ಮಸೂದ್ ಅಜರ್‌ನ ನಿಕಟ ಸಹಚರ, ಈ ಸಹಚರನ ಅವನ ತಾಯಿ ಹಾಗೂ ಇನ್ನಿಬ್ಬರು ಸಹಚರರು ಸತ್ತಿದ್ದಾರೆ ಎಂಬುದಾಗಿ ಸ್ವತಹ ಅಜರ್ ಮಸೂದ್ ಮಾಹಿತಿ ನೀಡಿರುವುದಾಗಿ ಬಿಬಿಸಿ ಉರ್ದು ವರದಿ ಮಾಡಿದೆ.