ಜಗತ್ತಿಗೆ ಕಂಟಕವಾಗಿದ್ದ ಜೈಶ್, ಲಷ್ಕರ್, ಹಿಜ್ಬುಲ್‌ಗೆ ಮರ್ಮಾಘಾತ
ನವದೆಹಲಿ: ಇಂದು ಮುಂಜಾನೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟದ್ದು ಸ್ವತಹ ಪ್ರಧಾನಿ ನರೇಂದ್ರ ಮೋದಿ ಎಂದು ಮೂಲಗಳು ತಿಳಿಸಿವೆ. ಸಿಂಧೂರ ಭಾರತೀಯರ ನಾರಿಯರ ಪಾಲಿಗೆ ಅತ್ಯಂತ ಪವಿತ್ರವಾದದ್ದು. ಏ.22ರಂದು ಪಹಲ್ಗಾಮ್‌ನಲ್ಲಿ ಅನೇಕ ಹಿಂದೂ ಮಹಿಳೆಯರ ಎದುರೇ ಅವರ ಗಂಡಂದಿರನ್ನು ಗುಂಡಿಕ್ಕಿ ಕೊಂದು ಉಗ್ರರು ಸಿಂಧೂರವನ್ನು ಅಳಿಸಿ ಹಾಕಿದ್ದರು. ಹೀಗಾಗಿ ಆಪರೇಷನ್ ಸಿಂಧೂರ್ ಹೆಸರಿಡಲಾಗಿತ್ತು. ಕಾರ್ಯಾಚರಣೆಯನ್ನು ಶುರುವಿನಿಂದ ಕೊನೆಯ ತನಕ ವಾರ್ ರೂಮ್‌ನಲ್ಲಿ ಕುಳಿತು ಪ್ರಧಾನಿ ಮೋದಿ ಮೇಲ್ವಿಚಾರಣೆ ಮಾಡಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಪರಿಣಾಮಗಳ ಬಗ್ಗೆ ಸರಕಾರಕ್ಕೆ ಅರಿವು ಇತ್ತು. ಹೀಗಾಗಿ ಯಾವುದೇ ಕಾರ್ಯಾಚರಣೆಗೆ ಮೂರೂ ಪಡೆಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿತ್ತು.
ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಹಭಾಗಿತ್ವದೊಂದಿಗೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಲಾಗಿದೆ. ಈ ಹಿಂದೆ ನಡೆದ ಎರಡು ಸರ್ಜಿಕಲ್ ಸ್ಟ್ರೈಕ್‌ಗಳಲ್ಲಿ ವಾಯುಪಡೆಯ ಪಾತ್ರವೇ ದೊಡ್ಡದಿತ್ತು. ಆದರೆ ಆಪರೇಷನ್ ಸಿಂಧೂರ್ ಬಹಳ ಜಟಿಲ ಮತ್ತು ಹೆಚ್ಚು ಅಪಾಯಕಾರಿಯಾಗಿತ್ತು. ಪಾಕಿಸ್ಥಾನದೊಳಗೆ ಸುಮಾರು 500 ಕಿ.ಮೀ.ನಷ್ಟು ಹೋಗಿ ಗುರಿಗಳಿಗೆ ಕ್ಷಿಪಣಿ ದಾಳಿ ಮಾಡಬೇಕಿತ್ತು ಎಂದು ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ಉನ್ನತ ಮಟ್ಟದ ಸಭೆಯಲ್ಲಿ ಸರಕಾರ ಮೂರು ಪಡೆಗಳ ದಂಡನಾಯಕರಿಗೆ ಕಾರ್ಯಾಚರಣೆಯ ಸಮಯ, ವಿಧಾನ ಮತ್ತು ರೀತಿಯನ್ನು ನಿರ್ಧರಿಸುವ ಪರಮ ಅಧಿಕಾರವನ್ನು ನೀಡಿತ್ತು. ಇದಾದ ಒಂದು ವಾರದೊಳಗೆ ಕರಾರುವಕ್ಕು ದಾಳಿ ಮಾಡಿ ಪಾಕಿಸ್ಥಾನದ ಸೊಕ್ಕು ಅಡಗಿಸಲಾಗಿದೆ.
ಭಾರತ ಧ್ವಂಸ ಮಾಡಿರುವ ಈ ಉಗ್ರರ 9 ನೆಲೆಗಳು ಮೋಸ್ಟ್ ಡೇಂಜರಸ್ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅದಕ್ಕಾಗಿ ಭಾರತೀಯ ಸೇನೆಯು ನಾಗರಿಕರು ಮತ್ತು ಸೇನೆಯನ್ನ ಗುರಿಯಾಗಿಸದೆ ಕೇವಲ ಉಗ್ರರ ನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಸಿದೆ.
ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವ ಪಾಕಿಸ್ಥಾನದ ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮ್ಮದ್, ಲಷ್ಕರ್ ಇ ತೈಬಾ ಮತ್ತು ಹಿಜ್ಬುಲ್ ಮುಜಾಹಿದಿನ್ ನೆಲೆಗಳೇ ದಾಳಿಯ ಗುರಿಯಾಗಿದ್ದವು. ದಾಳಿ ಮಾಡಿದ ಒಂಬತ್ತು ಗುರಿಗಳ ಪೈಕಿ ನಾಲ್ಕು ಗಡಿಯಿಂದ ಬಹಳ ದೂರದಲ್ಲಿದ್ದರೆ, ಉಳಿದ ಐದು ಗುರಿಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ.
ಬಹವಾಲ್ಪುರದಲ್ಲಿರುವ ಜೈಶ್‌ನ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್‌ನ ಸರ್ಜಲ್ ಕ್ಯಾಂಪ್, ಕೋಟ್ಲಿಯ ಮರ್ಕಜ್ ಕೋಟ್ಲಿ ಮತ್ತು ಮುಜಾಫರಬಾದ್‌ನ ಸೆದ್ನಾ ಬಿಲಾಲ್ ಕ್ಯಾಂಪ್, ಲಷ್ಕರ್ ಉಗ್ರ ತರಬೇತಿ ಕೇಂದ್ರಗಳಾದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾ, ಬರ್ನಾಲದ ಮರ್ಕಜ್ ಅಹ್ಲೆ ಅದಿತ್ ಮತ್ತು ಮುಜಾಫರಬಾದ್‌ನ ಶ್ವಾವೈ ನಲ್ಲಾ ಕ್ಯಾಂಪ್‌ಗಳನ್ನು ಧ್ವಂಸ ಮಾಡಲಾಗಿದೆ. ಕೋಟ್ಲಿಯಲ್ಲಿರುವ ಹಿಜ್ಬುಲ್ ಮುಜಾಹಿದಿನ್‌ನ ಮರ್ಕಜ್ ರಹೀಲ್ ಶಹೀದಿ ಮತ್ತು ಸಿಯಾಲ್‌ಕೋಟ್‌ನ ಮೆಹಮೂನ ಜೋಯ ಕ್ಯಾಂಪ್‌ಗಳನ್ನೂ ನಾಶ ಮಾಡಲಾಗಿದೆ.
ತಡರಾತ್ರಿ 1.44 ಗಂಟೆ ವೇಳೆಗೆ ಪಾಕ್ ಉಗ್ರರ ಅಡಗುತಾಣಗಳ ಮೇಲೆ ರಫೇಲ್ ಇನ್ನಿತರ ಫೈಟರ್ ಜೆಟ್‌ಗಳಿಂದ ದಾಳಿ ನಡೆಸಿದ ಭಾರತೀಯ ಸೇನೆ ರಾತ್ರಿ 2.07 ವೇಳೆಗೆ ಕಾರ್ಯಾಚರಣೆ ಮುಗಿಸಿತ್ತು. ದಾಳಿ ನಡೆಸಿದ ಬಳಿಕ ಭಾರತೀಯ ಸೇನೆಯ ಜೆಟ್‌ಗಳು ಸೇಫ್ ಆಗಿ ಮರಳಿವೆ. ದಾಳಿಯಲ್ಲಿ 90ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ, ಜೊತೆಗೆ ಲಷ್ಕರ್ ಉಗ್ರರಿಗೆ ತರಬೇತಿ ನೀಡಿದ್ದ ಸುಬಾನಲ್ಲಾಹ್ ಮಸೀದಿ ಸೇರಿದಂತೆ ಪ್ರಮುಖ ತಾಣಗಳು ಧ್ವಂಸವಾಗಿವೆ.