ತಣಿದ 140 ಕೋಟಿ ಭಾರತೀಯರ ಆಕ್ರೋಶ ; ಯುದ್ಧಕ್ಕೆ ಆಹ್ವಾನ ಎಂದ ಪಾಕಿಸ್ಥಾನ
ನವದೆಹಲಿ: ಇಡೀ ದೇಶ ಗಾಢ ನಿದ್ರೆಯಲ್ಲಿರುವ ಹೊತ್ತು ಮೂರೂ ಸೇನಾ ಪಡೆಗಳು ಪಾಕಿಸ್ಥಾನದ 9 ಉಗ್ರ ನೆಲೆಗಳ ಮೇಲೆ ಕರಾರುವಕ್ಕು ದಾಳಿ ಮಾಡಿ 140 ಕೋಟಿ ಭಾರತೀಯರ ಆಕ್ರೋಶದ ಆಗ್ರಹವನ್ನು ಈಡೇರಿಸಿವೆ. ಕಳೆದ ಏ.22ರಂದು ಪಾಕಿಸ್ಥಾನದ ಉಗ್ರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಎರಗಿ 26 ಮಂದಿಯನ್ನು ಗುಂಡಿಕ್ಕಿ ಸಾಯಿಸಿದ ಬಳಿಕ ಭಾರತೀಯರ ರಕ್ತ ಕೊತ ಕೊತ ಕುದಿಯುತ್ತಿತ್ತು. ಸೇಡು ತೀರಿಸಲೇ ಬೇಕೆಂಬ ಆಗ್ರಹ ಎಲ್ಲೆಡೆಯಿಂದ ಕೇಳಿಬರುತ್ತಿತ್ತು. ಆಪರೇಷನ್ ಸಿಂಧೂರ್ ಭಾರತೀಯರ ಆಕ್ರೋಶವನ್ನು ಸದ್ಯಕ್ಕೆ ಶಮನಗೊಳಿಸಿದೆ.
ಭಾರತದಿಂದ ಇಂಥದ್ದೊಂದು ದಾಳಿ ಆಗಬಹುದು ಎಂಬ ನಿರೀಕ್ಷೆ ಪಾಕಿಸ್ಥಾನಕ್ಕೆ ಇತ್ತು. ಆದರೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಡೆದಾಗ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಶತ್ರು ರಾಷ್ಟ್ರ ಇತ್ತು. ಪಾಕಿಸ್ಥಾನ ಮತ್ತು ಪಾಕಿಸ್ಥಾನ ಆಕ್ರಮಿತ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಮೂಲಸೌಲಭ್ಯಗಳನ್ನು ಮಾತ್ರ ಗುರಿಮಾಡಿಕೊಂಡು ದಾಳಿ ಮಾಡಿದ್ದೇವೆಯೇ ಹೊರತು ನಾಗರಿಕ ಅಥವಾ ರಕ್ಷಣಾ ನೆಲೆಗಳಿಗೆ ಎರಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಕನಿಷ್ಠ 90 ಉಗ್ರರು ದಾಳಿಯಲ್ಲಿ ಸತ್ತಿದ್ದಾರೆ. ನೂರಾರು ಉಗ್ರರು ಗಾಯಗೊಂಡಿದ್ದಾರೆ. ದಾಳಿಯ ಬಳಿಕ ಪಾಕಿಸ್ಥಾನದಲ್ಲಿ ಪ್ರಕ್ಷುಬ್ಧ ಸ್ಥಿತಿ ನೆಲೆಸಿದ್ದು, ಅಲ್ಲಿನ ಸರಕಾರ ಇದನ್ನು ಯುದ್ಧಕ್ಕೆ ಆಹ್ವಾನ ಎಂದು ವ್ಯಾಖ್ಯಾನಿಸಿ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿದೆ.
ಆಪರೇಷನ್ ಸಿಂಧೂರ್ ಯಶಸ್ವಿಯಾದ ಬೆನ್ನಿಗೆ ಸೇನೆ ʼಜಸ್ಟಿಸ್ ಈಸ್ ಸರ್ವಡ್ ಜೈ ಹಿಂದ್ʼ ಎಂದು ಪೋಸ್ಟ್ ಮಾಡಿ ಕಾರ್ಯಾಚರಣೆ ಮುಕ್ತಾಯವಾಗಿರುವುದನ್ನು ತಿಳಿಸಿತು. ಭಾರತದ ವಿರುದ್ಧ ಸದಾ ಸಂಚು ಮಾಡುತ್ತಿರುವ ಜೈಶ್ ಇ ಮುಹಮ್ಮದ್ ನೆಲೆಯಿರುವ ಬಹವಾಲ್ಪುರ್ ಮತ್ತು ಲಷ್ಕರ್ ಇ ತೈಬಾದ ನೆಲೆ ಮುರಿಡ್ಕೆ ದಾಳಿಯ ಮುಖ್ಯ ಗುರಿಗಳಾಗಿದ್ದವು. ಉಗ್ರರ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದೇವೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಗುರಿ ಮಾಡಲಾದ 9 ಸ್ಥಳಗಳಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಉಗ್ರ ಹಾಫಿಜ್‌ನ ಮಸೀದಿ ಧ್ವಂಸ
ಭಾರತೀಯ ಸೇನೆ ತಡರಾತ್ರಿ 1.44ರ ವೇಳೆ ರಫೇಲ್, ಮಿರಾಜ್-2000 ಮತ್ತು ಸುಖೋಯ್-30 ಸೇರಿದಂತೆ ಇತರ ಯುದ್ಧ ವಿಮಾನಗಳನ್ನ ಬಳಸಿ ಪಾಕ್ ಉಗ್ರತಾಣಗಳ ಮೇಲೆ ದಾಳಿ ಮಾಡಿದೆ. ಭಾರತ ನಡೆಸಿದ ಈ ದಾಳಿಯಲ್ಲಿ ಲಷ್ಕರ್ ಉಗ್ರ ಹಫೀಜ್ ಸಯಿದ್‌ಗೆ ಸಂಬಂಧಿಸಿದ ಮಸೀದಿ ಧ್ವಂಸವಾಗಿದೆ. ಸುಮಾರು 18 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಈ ಮಸೀದಿ ಆವರಣದಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಉನ್ನತ ಮೂಲಗಳು ತಿಳಿಸಿವೆ.
ಯಾವೆಲ್ಲ ಸ್ಥಳಗಳ ಮೇಲೆ ದಾಳಿ?
ಮುಜಫರಾಬಾದ್, ಕೋಟ್ಲಿ, ಗುಲ್ಪುರ್, ಬಿಂಬರ್, ಪಾಕಿಸ್ತಾನ, ಸಿಯಾಲ್‌ಕೋಟ್, ಚಕ್ ಅಮರು, ಮುರಿಡ್ಕೆ, ಬಹವಾಲ್ಪುರದ ಮೇಲೆ ಭಾರತ ಏರ್‌ಸ್ಟ್ರೈಕ್ ಮಾಡಿದೆ.