ಪುತ್ತೂರು: ಶಾಲೆಗಳ ಕಟ್ಟಡಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಜನರ ದೂರುಗಳಿಗೆ ಸರಿಯಾದ ಸ್ಪಂದನೆಯನ್ನು ನೀಡಬೇಕು. ವಸತಿ ನಿಲಯಗಳಲ್ಲಿ ನಿರ್ವಹಣೆಯ ಶಿಕ್ಷಣ ನೀಡಬೇಕು ಎಂದು ರಾಜ್ಯ ನಗರಾಭಿವೃದ್ಧಿ ಜಂಟಿ ಕಾರ್ಯದರ್ಶಿ ಎಚ್. ಕೆ. ಕೃಷ್ಣಮೂರ್ತಿ ಹೇಳಿದರು.
ಅವರು ಮಂಗಳವಾರ ತಾಲೂಕು ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಭೂಕುಸಿತ, ಚರಂಡಿ ನಿರ್ವಹಣೆ ಸೇರಿ ಮಳೆಗಾಲದ ಬಗ್ಗೆ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಅಗತ್ಯ ಯಂತ್ರೋಪಕರಣಗಳನ್ನು ಸನ್ನದ್ದ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಪ್ರತಿಯೊಂದು ಕಡೆಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪರಿಸ್ಥಿತಿ ಸುದಾರಿಸುತ್ತದೆ. ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದ್ದು, ಇದಕ್ಕೆ ಪೂರ್ವ ತಯಾರಿ ಅತೀ ಅಗತ್ಯ. ಜನತೆಗೆ ಕುಡಿಯುವ ನೀರಿಗೆ ತೊಂದರೆ ಕುರಿತು ದೂರು ಬರದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಒದಗಿಸಲು ಸಾಕಷ್ಟು ಮೂಲಗಳಿವೆ. ಕೆರೆ, ಬಾವಿ, ಕೊಳವೆಬಾವಿ, ಕಿಂಡಿಅಣೆಕಟ್ಟುಗಳಿಂದ ನೀರನ್ನು ಒದಗಿಸುವ ಕೆಲಸ ಪ್ರಸ್ತುತ ನಡೆಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಬೇರೆ ಪರಿಹಾರ ದಾರಿಗಳು ಇಲ್ಲದಾಗ ಮಾತ್ರ ಟ್ಯಾಂಕರ್ ನಲ್ಲಿ ನೀರು ಒದಗಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬಳಿಕ ಸರ್ವೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.
ನಗರಸಭೆ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸುವ ಮೇಲ್ವಿಚಾರಣೆಗಾಗಿ ತಾಲೂಕುಮಟ್ಟದಲ್ಲಿ ತಂಡವೊಂದನ್ನು ರಚನೆ ಮಾಡಬೇಕು. ಗುಣಮಟ್ಟದ ನೀರು ಒದಗಿಸುವಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಎಲ್ಲಾ ಇಲಾಖೆಗಳೂ ಇದರಲ್ಲಿ ಸಮಾನ ಜವಾಬ್ದಾರಿ ವಹಿಸುವ ಕಂದಾಯ ಇಲಾಖೆಗೆ ಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ಸೂಚನೆ ನೀಡಲಾಯಿತು.