ಕೊಲೆಗಡುಕರಿಗೆ ಪೊಲೀಸರ ಪೂರ್ಣ ಸಹಕಾರ ಇತ್ತು ಎಂದ ಶಾಸಕ
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ. ಹೀಗಾಗಿ ಅವರು ನಡೆಸುವ ತನಿಖೆಯಲ್ಲಿ ನನಗೆ ವಿಶ್ವಾಸವಿಲ್ಲ. ಎನ್‌ಐಎ ತನಿಖೆಯಾದರೆ ಮಾತ್ರ ಪೂರ್ಣ ಸತ್ಯ ಹೊರಬರಬಹುದು ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಹಾಸ್ ಶೆಟ್ಟಿ ಕೊಲೆಗೆ, ಕೊಲೆಗಡುಕರಿಗೆ ಪೊಲೀಸರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಅಪಾದಿಸಿದರು.
ಕೊಲೆ ವ್ಯವಸ್ಥಿತ ರೀತಿಯಲ್ಲಿ ನಡೆದಿದೆ. ಒಂದು ರೀತಿಯಲ್ಲಿ ಕೊಲೆಗಡುಕರು ಮತ್ತು ಪೊಲೀಸರ ನಡುವೆ ಒಡಂಬಡಿಕೆಯಾಗಿದೆ. ವಾಹನದಲ್ಲಿ ಆಯುಧ ಇಡಬಾರದು ಎಂದು ಸುಹಾಸ್ ಶೆಟ್ಟಿ ಆತ್ಮರಕ್ಷಣೆಗೆ ಕಾರಿನಲ್ಲಿಟ್ಟಿದ್ದ ಆಯುಧವನ್ನು ಎರಡು ದಿವಸಗಳ ಮೊದಲು ಪೊಲೀಸರು ತೆರವುಗೊಳಿಸಿದ್ದರು. ಕೊಲೆಯಾದ ದಿನ ಬೆಳಗ್ಗೆ ಸುಹಾಸ್ ಶೆಟ್ಟಿ ತನ್ನ ಕಾರನ್ನು ಸರ್ವಿಸ್‌ಗೆ ಇಡುವಾಗ ಇಬ್ಬರು ಆರೋಪಿಗಳು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಸುಹಾಸ್ ಶೆಟ್ಟಿಯನ್ನು ಕೊಲೆಗೈಯಲು 4 ಮಂದಿಗೆ 20-25 ಮಂದಿ ಕೋಟೆ ಕಟ್ಟಿ ರಕ್ಷಣೆ ನೀಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿಯನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ಗಮನ ಹರಿಸಿರಲಿಲ್ಲ. ಕೊಲೆಯಾದ ರೀತಿ, ಕೊಲೆ ನಡೆದ ಸ್ಥಳ ಎಲ್ಲವೂ ಇದು ಪೂರ್ವಯೋಜಿತ ಕೃತ್ಯ ಮತ್ತು ಸ್ಥಳೀಯರು ಇದಕ್ಕೆ ಬೆಂಬಲ ನೀಡಿದ್ದಾರೆ ಎಂಬುದರತ್ತ ಬೊಟ್ಟು ಮಾಡಿ ತೋರಿಸುತ್ತಿದೆ. ಆದರೆ ಪೊಲೀಸರು ಸ್ಥಳೀಯರ ವಿರುದ್ಧ ಇನ್ನೂ ತನಿಖೆ ಮಾಡಿಲ್ಲ. ಇದರ ಬದಲಾಗಿ ರಾತ್ರಿ 2 ಗಂಟೆಗೆ ಹಿಂದುಗಳ ಮನೆಗೆ ನುಗ್ಗಿ ತನಿಖೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.