ಆರೋಪಿಯೊಬ್ಬನ ಸಂಬಂಧಿಕ ಮಹಿಳೆಯರು
ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡುವಾಗ ಸ್ಥಳದಲ್ಲಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕೊಲೆ ಮಾಡಿ ಕಾರಿನಲ್ಲಿ ಪರಾರಿಯಾಗುತ್ತಿದ್ದಾಗ ಸ್ಥಳದಲ್ಲಿದ್ದ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಕಾರಿನ ಸಮೀಪ ಬಂದಿದ್ದರು. ಈ ಪೈಕಿ ಓರ್ವ ಮಹಿಳೆ ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಾ ಆರೋಪಿಯೊಬ್ಬನ ಸಮೀಪ ಸಾಗಿ ಬಂದಿದ್ದಳು. ಈ ಹಿನ್ನೆಲೆಯಲ್ಲಿ ಕೊಲೆಯಲ್ಲಿ ಇವರ ಪಾತ್ರವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಮಹಿಳೆಯರು ಘಟನೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಅವರನ್ನು ಪ್ರಕರಣದ ಎರಡನೇ ಆರೋಪಿ ನಿಯಾಜ್‌ನ ಚಿಕ್ಕಮ್ಮ ಮತ್ತು ಸೋದರ ಸಂಬಂಧಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ಮಹಿಳೆಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಂಬಂಧಿಯೊಬ್ಬರನ್ನು ಭೇಟಿ ಮಾಡಲು ಬಜ್ಪೆಯ ಫ್ಲ್ಯಾಟ್‌ಗೆ ಬಂದಿದ್ದರು. ಅಲ್ಲಿಂದ ಮನೆಗೆ ಹಿಂದಿರುಗುವಾಗ ಘಟನಾ ಸ್ಥಳದ ಸಮೀಪದ ಹೋಟೆಲ್‌ನಿಂದ ಊಟ ಪಾರ್ಸೆಲ್ ತೆಗೆದುಕೊಂಡಿದ್ದಾರೆ. ಆಗ ಅವರು ನಿಯಾಜ್ ರಸ್ತೆಯಲ್ಲಿ ಓಡುತ್ತಿರುವುದನ್ನು ಗಮನಿಸಿದ್ದಾರೆ. ಸ್ಥಳದಲ್ಲಿ ಅಪಘಾತವಾದಂತೆ ಕಂಡುಬಂದ ಕಾರಣ ನಿಯಾಜ್‌ನನ್ನು ಸಂಪರ್ಕಿಸಿದ್ದಾಗಿ ವಿಚಾರಣೆ ವೇಳೆ ಮಹಿಳೆಯರು ಹೇಳಿದ್ದಾರೆ.