ಎಲ್ಲ ರೀತಿಯ ಮದ್ಯದ ಬೆಲೆ ಹೆಚ್ಚಿಸಲು ಅಬಕಾರಿ ಇಲಾಖೆ ತೀರ್ಮಾನ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮದ್ಯದ ಬೆಲೆ ಏರಿಕೆ ಆಗಲಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ದರ ಹೆಚ್ಚಳ ಮಾಡಿದೆ. ಇದೀಗ ಮತ್ತೆ ಮೂರನೇ ಬಾರಿ ಮದ್ಯ ದರ ಹೆಚ್ಚಳವಾಗಲಿದ್ದು, ಈ ವಾರದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.
2024-25ನೇ ಸಾಲಿನಲ್ಲಿ ಸರ್ಕಾರ ಅಬಕಾರಿ ಇಲಾಖೆಗೆ 38,600 ಕೋಟಿ ರೂ. ಕಂದಾಯ ಸಂಗ್ರಹಿಸುವ ಟಾರ್ಗೆಟ್ ನೀಡಿತ್ತು. ಈ ಬಾರಿಯ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂ. ಟಾರ್ಗೆಟ್ ನೀಡಲಾಗಿದೆ. ಅಂದರೆ ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರೂ. ಟಾರ್ಗೆಟ್ ನೀಡಿದ್ದು, ಹೊಸ ಗುರಿ ತಲುಪಲು ಅಬಕಾರಿ ಇಲಾಖೆ ಮುಂದೆ ಮದ್ಯದ ಬೆಲೆ ಹೆಚ್ಚಿಸುವುದರ ಹೊರತು ಬೇರೆ ದಾರಿ ಇಲ್ಲ.
ಈ ವಾರದಿಂದಲೇ ಎಲ್ಲರೀತಿಯ ಮದ್ಯದ ಬೆಲೆ ಶೇ.10 ರಷ್ಟು ಏರಿಕೆ ಆಗಲಿದೆ. ಈಗಾಗಲೇ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಬೆಲೆ ಏರಿಕೆ ಬಗ್ಗೆ ಎಲ್ಲ ಮದ್ಯ ಮಾರಾಟಗಾರರಿಗೆ ಮಾಹಿತಿ ನೀಡಲಾಗಿದೆಯಂತೆ.
ಮದ್ಯದ 16 ಸ್ಲ್ಯಾಬ್ಗಳಲ್ಲಿ 1ರಿಂದ 4 ಸ್ಲ್ಯಾಬ್ಗಳ ಮೇಲೆ ದರ ಏರಿಕೆ ಏರಿಕೆ ಮಾಡಲು ಅಬಕಾರಿ ಇಲಾಖೆ ಮುಂದಾಗಿದ್ದು, ಸ್ಯ್ಲಾಬ್-1, ಸದ್ಯ 80 ರೂಪಾಯಿ ಇದ್ದು ಅದರ ಮೇಲೆ 10 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್-2, 155 ರೂಪಾಯಿ ಇದ್ದು ಅದರ ಮೇಲೆ 15 ರೂಪಾಯಿ ಏರಿಕೆ ಆಗಲಿದೆ, ಸ್ಲ್ಯಾಬ್-3, 185 ರೂಪಾಯಿ ಇದ್ದು ಅದರ ಮೇಲೆ 15 ರಿಂದ 20 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್-4, 235 ರೂಪಾಯಿ ಇದ್ದು ಅದರ ಮೇಲೆ 20 ರಿಂದ 25 ರೂಪಾಯಿ ಏರಿಕೆ ಆಗಲಿದೆ. ಒಂದು ಕ್ವಾರ್ಟರ್ ಮೇಲೆ 10 ರಿಂದ 25 ರೂಪಾಯಿವರೆಗೆ ದರ ಏರಿಕೆ ಆದರೆ ಒಂದು ಫುಲ್ ಬಾಟಲ್ ಮೇಲೆ 50 ರಿಂದ 100 ರೂ. ವರೆಗೆ ಏರಿಕೆ ಆಗಲಿದೆ.