30 ಯುದ್ಧ ವಿಮಾನಗಳಿಂದ ಬಾಂಬ್‌ಗಳ ಸುರಿಮಳೆ
ಟೆಲ್ ಅವೀವ್: ತನ್ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೌತಿ ಉಗ್ರರು ದಾಳಿ ಮಾಡಿದ್ದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೋಮವಾರ ರಾತ್ರಿ ಯೆಮೆನ್‌ನ ಹೊಡೈದಾ ಬಂದರು ಮೇಲೆ ಭಯಾನಕ ಬಾಂಬ್ ದಾಳಿ ನಡೆಸಿದೆ. ಈ ಸಾವಿನಿಂದಾದ ನಾಶನಷ್ಟ ಮತ್ತು ಸಾವುನೋವಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ಆದರೆ ಇಡೀ ಬಂದರು ಮತ್ತು ಅದರ ಸಮೀಪವಿದ್ದ ಸಿಮೆಂಟ್ ಫ್ಯಾಕ್ಟರಿ ಸರ್ವನಾಶವಾಗಿದೆ ಎಂದು ವರದಿಗಳು ತಿಳಿಸಿವೆ.
ಇಸ್ರೇಲ್‌ನ 30 ಯುದ್ಧ ವಿಮಾನಗಳು ಯೆಮೆನ್‌ನ ಹೊಡೈದಾ ಬಂದರು ಮೇಲೆ ಬಾಂಬ್ ಮಳೆ ಸುರಿಸಿದ್ದು, ಈ ದಾಳಿಗೆ ಹೊಡೈದಾ ಬಂದರು ಧ್ವಂಸಗೊಂಡಿದೆ. ಭಾರಿ ಪ್ರಮಾಣದ ಬೆಂಕಿಯ ಜ್ವಾಲೆಗಳು ಮೇಲಕ್ಕೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇರಾನ್ ಬೆಂಬಲಿತ ಹೌತಿಗಳು ಟೆಲ್ ಅವೀವ್‌ನ ಮುಖ್ಯ ವಿಮಾನ ನಿಲ್ದಾಣದ ಬಳಿ ಕ್ಷಿಪಣಿಯನ್ನು ಹಾರಿಸಿದ ನಂತರ ಇಸ್ರೇಲ್ ಪ್ರತೀಕಾರ ತೀರಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ವಿಮಾನ ನಿಲ್ದಾಣದ ಬಳಿ ಹೌತಿಗಳು ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು.
ಯೆಮೆನ್‌ನಿಂದ ಬಂದ ಹೆಚ್ಚಿನ ದಾಳಿಗಳನ್ನು ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ತಡೆಹಿಡಿದಿದ್ದವು. ಆದರೆ ಭಾನುವಾರ ರಕ್ಷಣಾ ವ್ಯವಸ್ಥೆಯನ್ನು ಬೇಧಿಸಿ ಒಂದು ಕ್ಷಿಪಣಿ ವಿಮಾನ ನಿಲ್ದಾಣದ ಮೇಲೆ ಬಿದ್ದಿತ್ತು. ಇದರ ಪರಿಣಾಮವಾಗಿ ಏರ್ ಇಂಡಿಯಾ ಸೇರಿ ಹಲವು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ವ್ಯತ್ಯಯವಾಗಿತ್ತು.