ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರದಲ್ಲಿ ಸುಮಾರು 16 ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಸ್ಟೀಮ್ ಬಾಯ್ಲರ್ ಸಿಸ್ಟಮ್ ನ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕೆನರಾ ಬ್ಯಾಂಕ್ ನ 10 ಲಕ್ಷ ರೂ., ಕರ್ಣಾಟಕ ಬ್ಯಾಂಕ್ ನ 5 ಲಕ್ಷ ರೂ. ಹಾಗೂ ದಾನಿಗಳ ದೇಣಿಗೆಯಲ್ಲಿ ಸ್ಟೀಮ್ ಬಾಯ್ಲರ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು. ಬೆಳಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಸಂತ ಕುಮಾರ್ ಕೆದಿಲಾಯರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಬಳಿಕ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅನ್ನಸಂತರ್ಪಣೆಗೆ ದಿನಂಪ್ರತಿ 5 ಸಾವಿರದವರೆಗೆ ಜನರು ಆಗಮಿಸುತ್ತಿದ್ದಾರೆ. ಭಕ್ತರಿಗೆ ಸಮಸ್ಯೆಯಾಗದಂತೆ ವ್ಯವಸ್ಥಿತವಾಗಿ ನಡೆಯಬೇಕೆಂಬ ನಿಟ್ಟಿನಲ್ಲಿ 16.75 ಲಕ್ಷದಲ್ಲಿ ಸ್ಟೀಮ್ ಬಾಯ್ಲರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದರು.
ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿ ಶುಕ್ರವಾರ ಬೆಂಗಳೂರಿನಲ್ಲಿ ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕೆ ತರುವ ಬಗ್ಗೆ ಸಭೆಯನ್ನು ಕರೆಯಲಾಗಿದೆ. ಅಧಿಕಾರಿಗಳು, ಸಮಿತಿಯವರು, ತಾಂತ್ರಿಕ ವಿಭಾಗದವರು ಇದರಲ್ಲಿ ಭಾಗವಹಿಸಲಿದ್ದಾರೆ. 20 ಮಂದಿಯ ಜೀರ್ಣೋದ್ಧಾರ ಸಮಿತಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ದೇವಾಲಯದ ಭಕ್ತರನ್ನು ಆಕರ್ಷಿಸುವ ರೀತಿಯಲ್ಲಿ ಕೆಲಸ ಮಾಡಲಾಗುವುದು ಎಂದು ಅಶೋಕ್ ರೈ ಹೇಳಿದರು.
ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನ್ಯಾಯಾಲಯದಲ್ಲಿ ತಡೆಗಳಿಲ್ಲ. ದೇವಾಲಯದ ಜಾಗದಲ್ಲಿ ಸ್ವಾಧೀನ ಇದ್ದರೆ, ಆದೇಶವಿಲ್ಲದೆ ಎಬ್ಬಿಸುವ ಹಾಗಿಲ್ಲ ಎಂದು ಹೇಳಲಾಗಿದೆ. ಈ ಆದೇಶದಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಲೀ, ದೇವಸ್ಥಾನದ ಜಾಗಕ್ಕಾಗಲೀ ಯಾವುದೇ ತೊಂದರೆಗಳಿಲ್ಲ. ಈಗ ನೀಡಿದ ಆದೇಶವನ್ನು ಪ್ರಶ್ನೆ ಮಾಡುವ ಜತೆಗೆ ದೇವಸ್ಥಾನದ ಎಲ್ಲಾ ಜಾಗವನ್ನು ಹಿಂಪಡೆಯಲಾಗುವುದು. ನ್ಯಾಯ ಕಟ್ಟಲೆಗೆ ಹೋಗುವವರು ಮಹಾಲಿಂಗೇಶ್ವರನ ಮೇಲೆ ಹೋಗುತ್ತಿರುವುದೆಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಹೋರಾಟ ಮಾಡುತ್ತಿರುವುದು, ವಾದ ಮಾಡುತ್ತಿರುವುದು ಯಾರ ವಿರುದ್ಧ ಎಂಬುದನ್ನು ಜನ ಅರ್ಥಮಾಡಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿದರು. ಕೆನರಾ ಬ್ಯಾಂಕ್ ರೀಜನಲ್ ಹೆಡ್ ರಂಜನ್ ಕುಮಾರ್, ಕರ್ಣಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಶ್ರೀಹರಿ, ಅಸಿಸ್ಟೆಂಟ್ ಮ್ಯಾನೇಜರ್ ಅಶೋಕ್ ಮೂಲ್ಯ, ರಾಜ್ಯ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಪುತ್ತೂರು ತಾಲೂಕು ನೋಡೆಲ್ ಅಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ. ಈಶ್ವರ ಬೇಡೇಕರ್, ಕೃಷ್ಣವೇಣಿ, ನಳಿನಿ ಪಿ. ಶೆಟ್ಟಿ, ದಿನೇಶ್ ಕುಲಾಲ್ ಪಿ. ವಿ., ಮಹಾಬಲ ರೈ ಒಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಕುಮಾರ್ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.