ಮೇ 5ರಂದು ನಿನ್ನ ಸ್ಥಳಕ್ಕೆ ಬಂದು ಸಾಯಿಸುತ್ತೇವೆ ಎಂದು ಟಾರ್ಗೆಟ್ ಫಿಕ್ಸ್
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಿಗೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸಂಚು ರೂಪಿಸಲಾಗಿದೆ. ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲು ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಮೇ 5ರಂದು ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಬಂದು ಕೊಲೆ ಮಾಡುತ್ತೇವೆ ಎಂದು ಭರತ್ ಕುಮ್ಡೇಲು ಫೋಟೊ ಸಹಿತ ಸೋಷಿಯಲ್ ಮೀಡಿಯಾದಲಿ ಪೋಸ್ಟ್ ಮಾಡಲಾಗಿದೆ.
ಸುಹಾಸ್ ಶೆಟ್ಟಿ ಫೋಟೊ ಹಾಕಿ ಅದಕ್ಕೆ ಹಸಿರು ಬಣ್ಣದಲ್ಲಿ ರೈಟ್ ಮಾರ್ಕ್ ಹಾಕಿದ್ದಾರೆ. ಇದರ ಬದಿಯಲ್ಲೇ ಭರತ್ ಕುಮ್ಡೇಲು ಫೋಟೊ ಹಾಕಿ ಮೇ 5ರಂದು ರಾತ್ರಿ ನಿನ್ನನ್ನು ಸಾಯಿಸುತ್ತೇವೆ ಎಂದು ಬರೆದಿದ್ದಾರೆ. ಈ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಎಸ್‌ಡಿಪಿಐ ಮುಖಂಡ ಆಶ್ರಫ್ ಕಲಾಯಿ ಹತ್ಯಾ ಪ್ರಕರಣದಲ್ಲಿ ಭರತ್ ಕುಮ್ಡೇಲು ಆರೋಪಿಯಾಗಿದ್ದಾರೆ. 2017ರ ಜೂನ್ 21 ರಂದು ಅಶ್ರಫ್ ಕಲಾಯಿಯ ಹತ್ಯೆಯಾಗಿತ್ತು. ಬಂಟ್ವಾಳದ ಬೆಂಜನಪದವು ಎಂಬಲ್ಲಿ ಅಶ್ರಫ್ ಬರ್ಬರವಾಗಿ ಹತ್ಯೆಗೀಡಾಗಿದ್ದ. ಎಸ್‌ಡಿಪಿಐನಲ್ಲಿ ಅಶ್ರಫ್ ಮುಂಚೂಣಿಯಲ್ಲಿದ್ದ. ಆತನ ಹತ್ಯೆ ಬಳಿಕ ಪ್ರತೀಕಾರವಾಗಿ ಬಂಟ್ವಾಳದ ಶರತ್ ಮಡಿವಾಳ ಹತ್ಯೆಯಾಗಿತ್ತು.
ಭರತ್ ಕುಮ್ಡೇಲು ಅಲ್ಲದೆ ಹಿಂದೂ ಮೂಖಂಡರಾದ ಶರಣ್ ಪಂಪ್‌ವೆಲ್ ಸೇರಿದಂತೆ ಸುಮಾರು ಐವರು ಹಿಂದೂ ಮುಖಂಡರು ಕೊಲೆ ಬೆದರಿಕೆ ಎದುರಿಸುತ್ತಿದ್ದಾರೆ.