ರಾಜ್ಯದಲ್ಲಿ 1.49 ಲಕ್ಷ ಅಭ್ಯರ್ಥಿಗಳು; 381 ಪರೀಕ್ಷಾ ಕೇಂದ್ರಗಳು
ಬೆಂಗಳೂರು: 2025-26ನೇ ಸಾಲಿನ ವೈದ್ಯಕೀಯ ಪ್ರವೇಶಕ್ಕೆ ಇಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಎನ್‌ಟಿಎ ವತಿಯಿಂದ ನೀಟ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ. ದೇಶದಲ್ಲಿ ಏಕಕಾಲಕ್ಕೆ ನಡೆಯುವ ಈ ಪರೀಕ್ಷೆಗೆ ರಾಜ್ಯದಲ್ಲಿ 381 ಪರೀಕ್ಷಾ ಕೇಂದ್ರಗಳಿವೆ. ರಾಜ್ಯದ 1.49 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಪರೀಕ್ಷೆ ನಡೆಯಲಿದೆ.
ನೀಟ್ ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಎನ್‌ಟಿಎ ನಕಲು ತಡೆಯುವ ಉದ್ದೇಶದಿಂದ ಪರೀಕ್ಷಾರ್ಥಿಗಳಿಗೆ ಕೆಲವೊಂದು ವಸ್ತ್ರ ಸಂಹಿತೆಯನ್ನ ಕಡ್ಡಾಯ ಮಾಡಿದೆ. ಆ ಪ್ರಕಾರ ನೀಟ್ ಪರೀಕ್ಷೆಗೆ ಕಿವಿಯೋಲೆ, ಬಳೆ, ಸರ, ಕಾಲ್ಗೆಜ್ಜೆ, ಮೂಗುತಿ, ಜಡೆಕ್ಲಿಪ್, ನತ್ತು, ಹೈ ಹೀಲ್ ಚಪ್ಪಲಿ ನಿಷೇಧವಿದೆ. ಯಾವುದೇ ಲೋಹದ ಉಪಕರಣ ಧರಿಸಲು ಅವಕಾಶವಿಲ್ಲ. ವಿದ್ಯಾರ್ಥಿಗಳು ಪೂರ್ಣ ತೋಳಿರುವ ಮೇಲಂಗಿ, ದೊಡ್ಡ ಬಟನ್‌ಗಳಿರುವ ಶರ್ಟ್, ಪ್ಯಾಂಟ್, ಶೂ, ಸಾಕ್ಸ್ ಧರಿಸುವಂತಿಲ್ಲ. ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಲು ಅಥವಾ ಧರಿಸಲು ಕೂಡ ಅವಕಾಶವಿಲ್ಲ.
ಇಂದು ನಡೆಯುವ ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರ ಒಳಗೆ ಪ್ರವೇಶಾತಿ ಪತ್ರದೊಂದಿಗೆ ಕಾಲೇಜಿನಿಂದ ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತದಾರರ ಗುರುತಿನ ಚೀಟಿ ಅಥವಾ ಇತರ ಯಾವುದಾದರೂ ಅಂಗೀಕೃತ ಗುರುತಿನ ಚೀಟಿಯ ಜೊತೆ ಒಂದು ಪೋಸ್ಟ್ ಕಾರ್ಡ್ ಮತ್ತು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳ ಸಹಿತ ಹಾಜರಾಗಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದೆ.
ನೀಟ್ ಪರೀಕ್ಷೆ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾಗಿದ್ದು, ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒರಿಯಾ, ತಮಿಳು, ತೆಲುಗು, ಉರ್ದು ಮತ್ತು ಪಂಜಾಬಿ ಸೇರಿದಂತೆ ಬಹುಭಾಷೆಗಳಲ್ಲಿ ದೇಶದ್ಯಾಂತ ನೀಟ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇಂದಿನ ಪರೀಕ್ಷೆಗೆ ಸಾಕಷ್ಟು ಮುನ್ನೆಚ್ಚರಿಕೆ ಕೂಡ ವಹಿಸಲಾಗಿದೆ. ಪರೀಕ್ಷಟ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯಿದೆ.