ನವದೆಹಲಿ: ಹಿಂದೂ ವಿವಾಹವೆಂದರೆ ಅದು ಹಾಡು, ನೃತ್ಯ, ಊಟದ ಕಾರ್ಯಕ್ರಮವಾಗಲೀ ಅಥವಾ ಹಣಕಾಸಿನ ವಹಿವಾಟಿನ ವ್ಯವಹಾರವಲ್ಲ. ಬದಲಾಗಿ ಅದೊಂದು ಸಂಸ್ಕೃತಿ ಎಂದು ಸುಪ್ರೀಂಕೋರ್ಟ್ ಬಣ್ಣಿಸಿದೆ. ಜೊತೆಗೆ ಸಪ್ತಪದಿ ಸೇರಿದಂತೆ ಅಗತ್ಯ ಶಾಸ್ತ್ರಗಳನ್ನು ಪೂರೈಸದೆ ನಡೆಸುವ ಮದುವೆಗೆ ಕಾನೂನಿನ ಮಾನ್ಯತೆಯೇ ಅಲ್ಲದೆ ಇಂಥ ಆಚರಣೆಗಳಿಲ್ಲದೆ ಮಾಡಿಸುವ ಮದುವೆ ನೋಂದಣಿ ಕೂಡಾ ಮದುವೆಗೆ ಮಾನ್ಯತೆ ದೊರಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೈಲಟ್ ದಂಪತಿಯ ವಿಚ್ಚೇದನ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾ.ಅಗಾಸ್ಟಿನ್ ಜಾರ್ಜ್ ಅವರನ್ನೊಳಗೊಂಡ ಪೀಠ ಇತ್ತೀಚೆಗೆ ಈ ಮಹತ್ವದ ತೀರ್ಪು ನೀಡಿದೆ.
ಯಾವುದೇ ಮದುವೆಯನ್ನು ನೋಂದಣಿ ಮಾಡಿಸಿದಾಕ್ಷಣ ಅದೇ ಅಂತಿಮವಾಗುವುದಿಲ್ಲ. ಯಾವುದೇ ಶಾಸ್ತೋಕ್ತವಾದ ಆಚರಣೆ ಇಲ್ಲದೇ, ಕೇವಲ ಸಂಸ್ಥೆಯೊಂದು ನೋಂದಣಿಯ ದಾಖಲೆ ಪತ್ರ ವಿತರಿಸಿ ದರೆ ಅದು ವೈವಾಹಿಕ ಜೀವನದ ಯಾವುದೇ ಸ್ಥಿತಿಯನ್ನು ಖಚಿತಪಡಿಸುವುದಿಲ್ಲ ಮತ್ತು ಹಿಂದೂ ವಿವಾಹ ಕಾಯ್ದೆ ಅನ್ವಯ ಯಾವುದೇ ವಿವಾಹವನ್ನು ಮಾನ್ಯಗೊಳಿಸುವುದೂ ಇಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.