ಕನ್ನಡಿಗರ ಅಭಿಮಾನವನ್ನು ಉಗ್ರರ ದಾಳಿಗೆ ಹೋಲಿಸಿ ವಿವಾದ ಸೃಷ್ಟಿಸಿರುವ ಗಾಯಕ
ಬೆಂಗಳೂರು: ಕನ್ನಡಿಗರ ಅಭಿಮಾನವನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿರುವ ಜನಪ್ರಿಯ ಹಿನ್ನೆಲೆ ಗಾಯಕ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಧರ್ಮರಾಜ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹೇಳುವಂತೆ ವಿದ್ಯಾರ್ಥಿಗಳು ಕೋರಿದಾಗ ಕನ್ನಡ…ಕನ್ನಡ… ಈ ರೀತಿಯ ವರ್ತನೆಯಿಂದಲೇ ಪಹಲ್ಗಾಮ್‌ನಲ್ಲಿ ಅಟ್ಯಾಕ್ ಆಗಿದ್ದು ಎಂದು ಸೋನು ನಿಗಮ್ ಹೇಳಿದ್ದರು. ಈ ವೀಡಿಯೊ ವೈರಲ್ ಆದ ಬಳಿಕ ಸೋನು ನಿಗಮ್ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಯಾವುದೇ ನಿರ್ಮಾಪಕರು ಸೋನು ನಿಗಮ್ ಅವರಿಂದ ಹಾಡು ಹಾಡಿಸಬಾರದು. ಹಾಡಿಸಿದರೆ ಅದಕ್ಕೆ ನೀವೆ ಹೊಣೆ ಎಂದು ಎಚ್ಚರಿಕೆ ನೀಡಿದ್ದವು.
ದೂರಿನ ಆಧಾರದ ಮೇಲೆ ಬಿಎನ್ಎಸ್ 351 (1) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 351 (2) (ಕ್ರಿಮಿನಲ್ ಮಾನಹಾನಿ), 353 (ಧಾರ್ಮಿಕ ಮತ್ತು ಭಾಷಿಕ ಭಾವನೆಗಳನ್ನ ಕೆರಳಿಸುವುದು) ಬಿಎನ್‌ಎಸ್ 352 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಸೆಕ್ಷನ್‌ನಡಿ ಎಫ್‌ಐಆರ್ ದಾಖಲಾಗಿದೆ.