ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೇಲೆ ತೀವ್ರ ನಿಗಾ
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ನಿನ್ನೆ ಬಂದ್ ಆಗಿದ್ದ ಮಂಗಳೂರು ನಗರ ಇಂದು ಸಹಜ ಸ್ಥಿತಿಗೆ ಮರಳಿದೆ. ನಿನ್ನೆ ಸುಹಾಸ್ ಶೆಟ್ಟಿ ಹತ್ಯೆ ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್ ನೀಡಿದ ಕರೆಯನ್ವಯ ಬಂದ್ ಆಚರಿಸಲಾಗಿತ್ತು.
ಬಂದ್ ಆಚರಿಸಲು ಒಪ್ಪದೆ ರಸ್ತೆಗಿಳಿದ ಕೆಲವು ಬಸ್‌ಗಳಿಗೆ ಕಲ್ಲುತೂರಿದ ಘಟನೆ ಮಂಗಳೂರು, ಮೂಲ್ಕಿ, ಕಾರ್ಕಳ ಮತ್ತಿತರೆಡೆಗಳಲ್ಲಿ ಸಂಭವಿಸಿತ್ತು. ನಿನ್ನೆಯಿಡೀ ಮಂಗಳೂರು ಸುತ್ತಮುತ್ತ ಬಿಗುವಿನ ಪರಿಸ್ಥಿಯಿತ್ತು. ಪುತ್ತೂರು, ಕಡಬ, ಬೆಳ್ತಂಗಡಿ ಮತ್ತಿತರೆಡೆಗಳಲ್ಲೂ ಪ್ರತಿಭಟನೆಗಳು ನಡೆದಿದ್ದವು. ಇಂದು ಎಲ್ಲೆಡೆ ಪರಿಸ್ಥಿತಿ ಸಹಜ ಸ್ಥಿಗೆ ಮರಳಿದೆ.
ಅಂಗಡಿಮುಂಗಟ್ಟುಗಳು ಬಾಗಿಲು ತೆರೆದಿದ್ದು, ವಾಹನಗಳು ಓಡಾಡುತ್ತಿವೆ. ಸಾರಿಗೆ ಬಸ್‌ಗಳು ಬೆಳಗ್ಗಿನಿಂದಲೇ ಸಂಚಾರ ಆರಂಭಿಸಿವೆ. ಜನರು ನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಚೇರಿ ಮತ್ತಿತರ ಸಂಸ್ಥಾಪನೆಗಳು ತೆರೆದಿವೆ.
ಅದಾಗ್ಯೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಕಟ್ಟೆಚ್ಚದಲ್ಲಿ ಇದ್ದಾರೆ. ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರ ಕಾವಲು ಹಾಕಲಾಗಿದೆ.
ಸೋಷಿಯಲ್ ಮೀಡಿಯಾ ಮೇಲೆ ನಿಗಾ
ಸೋಷಿಯಲ್ ಮೀಡಿಯಾದ ಪೋಸ್ಟ್‌ಗಳ ಮೂಲಕ ಶಾಂತಿ, ಸೌಹಾರ್ದ ಕದಡುವ ಪ್ರಯತ್ನ ನಡೆಯುತ್ತಿರುವುದರಿಂದ ಪೊಲೀಸರು ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತಿತರ ಸೋಷಿಯಲ್ ಮೀಡಿಯಾಗಳ ಮೇಲೂ ತೀವ್ರ ನಿಗಾ ಇರಿಸಿದ್ದಾರೆ. ಈಗಾಗಲೇ ವಿವಿಧೆಡೆ ಸೊಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಿರುವ ಸಂಬಂಧ 12 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.