ಇಂದು ಗೃಹ ಸಚಿವ ಪರಮೇಶ್ವರ್ ಮಂಗಳೂರಿಗೆ
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿ 8 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ಭಾರಿ ಸಂಚು ನಡೆಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವೀಡಿಯೊ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ 8 ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ವಿಚಾರವನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಇಂದು ಸುದ್ದಿಗೋಷ್ಠಿ ಕರೆದು ತನಿಖೆಯ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಗುರುವಾರ ರಾತ್ರಿ 8.30ರ ವೇಳೆಗೆ ಬಜ್ಪೆ ಸಮೀಪ ಕಿನ್ನಿಪದವು ಎಂಬಲ್ಲಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ರೋಶ ಮಡುಗಟ್ಟಿದ್ದು, ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಆರೋಪಿಗಳ ಹತ್ಯೆಗೆ ಬಳಸಿದ ವಾಹನಗಳು ಮತ್ತು ಆಯುಧಗಳು ನಿನ್ನೆಯೇ ಪೊಲೀಸರ ವಶವಾಗಿವೆ. ವಶಕ್ಕೆ ಪಡೆದಿರುವ ಕೆಲ ಆರೋಪಿಗಳು ದಕ್ಷಿಣ ಕನ್ನಡದಲ್ಲೇ ಅವಿತು ಕುಳಿತಿದ್ದರು ಎನ್ನಲಾಗಿದೆ. ಕಾಂಟ್ರಾಕ್ಟ್ ಕಿಲ್ಲರ್ಸ್ ಬಳಸಿ ಈ ಹತ್ಯೆ ನಡೆಸಿದ್ದಾರೆ ಎಂಬ ವದಂತಿಯೊಂದನ್ನು ಈ ನಡುವೆ ತೇಲಿ ಬಿಡಲಾಗಿದ್ದು, ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಇಂದು ಜಿ.ಪರಮೇಶ್ವರ್ ಮಂಗಳೂರಿಗೆ
ಈ ನಡುವೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಸ್ಥಿತಿಯನ್ನು ಅವಲೋಕಿಸುವ ಸಲುವಾಗಿ ಗೃ ಸಚಿವ ಜಿ.ಪರಮೇಶ್ವರ್ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಮಂಗಳೂರು ಕಮಿಷನರ್ ಸೇರಿದಂತೆ ಅಧಿಕಾರಿಗಳ ಜೊತೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಭೆ ನಡೆಸಲಿದ್ದಾರೆ.