ಪುತ್ತೂರು: ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯರಿಗೆ ಅವಮಾನಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೂ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸುಳ್ಯ ಪದವಿನ ಜೊಹರಾ ಮತ್ತು ಅವರ ಮಗ ಸಮದ್ ಎಂಬವರು ಪ್ರಕರಣದ ಆರೋಪಿಗಳು. ಆರೋಪಿಗಳ ಪರ ವಕೀಲರಾದ ಅಶ್ರಫ್ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್, ಸೆಲೀನಾ ನೆಕ್ಕಿಲಾಡಿ, ಮಿತ್ರಿಯಾ ವಾದಿಸಿದ್ದರು.
ಹಲ್ಲೆ ಯತ್ನ ನಡೆದ ಬಗ್ಗೆ ಮಾಹಿತಿ ದೊರೆತು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಬಂಧಿಸದೇ ಬಿಡುಗಡೆ ಮಾಡಿದ್ದಾರೆ ಎಂದು ವೈದ್ಯರುಗಳ ಸಂಘ ಹಾಗೂ ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ.
ಈ ಹಿನ್ನಲೆ ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ರಸ್ತೆ ತಡೆ ನಡೆದಿತ್ತು. ವಿವಿಧ ವೈದ್ಯಕೀಯ ಸಂಘಟನೆಗಳ ಪದಾಧಿಕಾರಿಗಳು, ಹಿಂದೂ ಸಂಘಟನೆಗಳ ಪ್ರಮುಖರೂ ಸೇರಿದಂತೆ ಹಲವು ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಆರೋಪಿಯ ಪತ್ತೆಗೆ ಪೊಲೀಸರಿಗೆ ಗಡುವು ನೀಡಲಾಗಿತ್ತು. ಅದರೆ ಎರಡೆರಡು ಬಾರಿ ನೀಡಿದ್ದ ಗಡುವು ಮುಗಿದರೂ ಆರೋಪಿಗಳ ಬಂಧನವಾಗಿರಲಿಲ್ಲ. ರಾತ್ರಿ ವೇಳೆಯೂ ಪ್ರತಿಭಟನೆ ಮುಂದುವರಿದು ಬಳಿಕ ಎಸ್ಪಿಯವರು ಆರೋಪಿಯ ಬಂಧನದ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಗಿತ್ತು. ಆದರೇ ಇದೀಗ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದು ಬಂಧನ ಭೀತಿಯಿಂದ ಪಾರಾಗಿದ್ದಾರೆ.