ಕೆಲವು ಬಸ್‌ಗಳಿಗೆ ಕಲ್ಲುತೂರಾಟ; ಅಂಗಡಿ ಹೋಟೆಲ್‌ಗಳು ಬಂದ್
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವುದನ್ನು ಅನುಸರಿಸಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ತಕ್ಷಣದಿಂದಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ಆದೇಶ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದ್ದು, ಮೇ 6 ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಈ ನಿಷೇಧಾಜ್ಞೆಯನ್ನು ತಕ್ಷಣದಿಂದಲೇ ಜಾರಿಗೆ ತಂದಿದ್ದು, ಈ ಘಟನೆಯ ನಂತರ ಯಾವುದೇ ಸಂಭವನೀಯ ಉದ್ವಿಗ್ನತೆ ಹೆಚ್ಚಾಗುವುದನ್ನು ತಡೆಯುವುದು, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಮಂಗಳೂರು ನಗರ ಸಂಪೂರ್ಣ ಸ್ತಬ್ಧ
ಬಜ್ಪೆಯಲ್ಲಿ ಗುರುವಾರ ರಾತ್ರಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ದಕ್ಷಿಣ ಕನ್ನಡ ಜಿಲ್ಲೆ ಬಂದ್ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಂಡಿದೆ. ಮಂಗಳೂರಿನ ಹಂಪನಕಟ್ಟೆ ಮತ್ತು ಮೂಲ್ಕಿಯಲ್ಲಿ ಸಂಚಾರ ನಡೆಸಿದ ಖಾಸಗಿ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆದ ಬಳಿಕ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಲ್ಲು ತೂರಾಟದಿಂದ ಮೂರು ಬಸ್‌ಗಳಿಗೆ ಹಾನಿ ಉಂಟಾಗಿದೆ. ಮಂಗಳೂರು ನಗರ ಸಂಪೂರ್ಣ ಸ್ತಬ್ಧಗೊಂಡಿದೆ.
ದಿಢೀರ್ ಬಂದ್ ಘೋಷಣೆಯಾದ ಕಾರಣ ಮುಂಜಾನೆ ಮಂಗಳೂರಿಗೆ ಆಗಮಿಸಿರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿತ್ಯ ಕೆಲಸ ಕಾರ್ಯಗಳಿಗೆಂದು ಹೊರಟವರು ಬಸ್ ಇಲ್ಲದ ಕಾರಣ ವಾಪಸ್ ಹೋಗಬೇಕಾಯಿತು. ಉಡುಪಿ, ಕಾರ್ಕಳ, ಮೂಡುಬಿದಿರೆ, ಪುತ್ತೂರ, ವಿಟ್ಲ, ಬೆಳ್ತಂಗಡಿ, ಉಪ್ಪಿನಂಗಡಿ ಮುಂತಾದೆಡೆಯಿಂದ ಮಂಗಳೂರಿಗೆ ಬರುವ ಖಾಸಗಿ ಬಸ್‌ಗಳೆಲ್ಲ ಸಂಚಾರ ಸ್ಥಗಿತಗೊಳಿಸಿವೆ.