ಸುಹಾಸ್ ಶೆಟ್ಟಿ ಕೊಲೆಗೆ ಹಿಂದೂ ಸಂಘಟನೆಗಳಿಂದ ಆಕ್ರೋಶ
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ವಿಶ್ವ ಹಿಂದೂ ಪರಿಷತ್ ಕರೆ ಕೊಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಮಂಗಳೂರಲ್ಲಿ ವಾಹನ ಸಂಚಾರ ಬಹುತೇಕ ಬಂದ್ ಆಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
ಮಂಗಳೂರಿನಲ್ಲಿ ಸಂಚಾರ ಆರಂಭಿಸಿದ ಬಸ್‌ಗೆ ಕಲ್ಲು ತೂರಲಾಗಿದೆ. ಗುಂಪೊಂದು ಹಂಪನಕಟ್ಟೆ ಬಳಿ ಬಸ್‌ಗೆ ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್ಸಿನ ಮುಂಭಾಗದ ಗಾಜು ಮುರಿದಿದೆ.
ಈ ನಡುವೆ ಸುಹಾಸ್ ಶೆಟ್ಟಿಯವರ ಶವವನ್ನು ನಗರದ ಎ.ಜೆ.ಆಸ್ಪತ್ರೆಯಿಂದ ಮನೆಯ ತನಕ ಮೆರವಣಿಗೆಯಲ್ಲಿ ಕೊಂಡೊಯ್ಯಲು ಹಿಂದೂ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಆದರೆ ಪೊಲೀಸರು ಇನ್ನೂ ಮೆರವಣಿಗೆಗೆ ಅನುಮತಿ ಕೊಟ್ಟಿ ಎನ್ನಲಾಗಿದೆ. ನಂತೂರು-ಪಂಪ್‌ವೆಲ್ ಮಾರ್ಗವಾಗಿ ಕಾರಿಂಜದ ಪುಳಿಮಜಲು ಮನೆಗೆ ಒಯ್ದು ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಹಿಂದೂ ಮುಖಂಡರೊಬ್ಬರು ತಿಳಿಸಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಬಿಎನ್ಎಸ್ ಕಲಂ 163 ಅಡಿಯಲ್ಲಿ ಮೇ 2 ರ ಮುಂಜಾನೆ 6 ಗಂಟೆಯಿಂದ ಮೇ 6ರ ಮುಂಜಾನೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶದಲ್ಲಿ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.