ತನಿಖೆಗೆ ವಿಶೇಷ ತಂಡ ರಚನೆ; ಶಾಂತಿ ಕಾಪಾಡಲು ಮನವಿ
ಮಂಗಳೂರು: ಮಂಗಳೂರು ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ. ಸುಹಾಸ್ ಶೆಟ್ಟಿ ಮೇಲೆ ದಾಳಿ ನಡೆಸಿ ಪರಾರಿಯಾದ ಆರೋಪಿಗಳು ಯಾರು ಎಂದು ನಮಗೆ ಗೊತ್ತಾಗಿದೆ. ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡುತ್ತೇವೆ. ಆರೋಪಿಗಳ ಸುಳಿವನ್ನು ಈಗಾಗಲೇ ಪತ್ತೆ ಹಚ್ಚಿಲಾಗಿದೆ ಎಂದು ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಾರೆ. ಕಾನೂನು ಕೈಗೆತ್ತಿಕೊಂಡವರ ಮೇಲೆ ಕಾನೂನು ರೀತಿ ಕ್ರಮ ಆಗಲಿದೆ ಎಂದು ಹಿತೇಂದ್ರ ಹೇಳಿದ್ದಾರೆ. ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇನ್ನು ಸುಹಾಶ್ ಶೆಟ್ಟಿ ಜೊತೆಗೆ ಕಾರಿನಲ್ಲಿದ್ದ ಇತರ ನಾಲ್ವರಿಂದಲು ಮಾಹಿತಿ ಕಲೆ ಹಾಕಲಾಗಿದೆ. ಸ್ಥಳೀಯರಿಂದ ಮಾಹಿತಿ ಕಲೆ ಹಾಕಿ ಇದೀಗ ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡ ಕಾರ್ಯನಿರ್ವಹಿಸಲಿದೆ ಎಂದು ಹಿತೇಂದ್ರ ಹೇಳಿದ್ದಾರೆ.
ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಮಂಗಳೂರು ಉದ್ವಿಗ್ನಗೊಂಡಿರುವ ಕಾರಣ ಐವರು ಎಸ್‌ಪಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಿಷೇಜಾಜ್ಞೆ ಇರಲಿದೆ. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶವಿಲ್ಲ ಎಂದು ಹಿತೇಂದ್ರ ಹೇಳಿದ್ದಾರೆ. ಯಾವುದೇ ವದಂತಿಗೆ ಕಿವಿ ಕೊಡಬೇಡಿ. ಎಲ್ಲರೂ ಶಾಂತಿ ಕಾಪಾಡಬೇಕಾಗಿ ಹಿತೇಂದ್ರ ಮನವಿ ಮಾಡಿದ್ದಾರೆ.
ಮೃತದೇಹ ಹಸ್ತಾಂತರ
ಇಂದು ಬಳಗ್ಗೆ ಶವಪರೀಕ್ಷೆ ಮುಗಿಸಿ ಇದೀಗ ಮೃತದೇಹವನ್ನು ಸುಹಾಸ್ ಶೆಟ್ಟಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೆರವಣಿಗೆಗೆ ಅವಕಾಶ ಕೇಳಿಲ್ಲ, ಈ ಬೇಡಿಕೆ ಇದ್ದರೆ ಸ್ಥಳೀಯ ಪೊಲೀಸರು ನಿರ್ಧರಿಸುತ್ತಾರೆ ಎಂದು ಹಿತೇಂದ್ರ ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆಗೆ ಬಳಸಿದ ಕಾರು ಸೀಜ್
ದಾಳಿಗೆ ಬಳಸಿದ್ದ ಮೀನಿನ ವಾಹನ, ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿಗೆ ಬಳಸಿದ ಕಾರಿನಲ್ಲಿ ಆಯುಧಗಳು ಪತ್ತೆಯಾಗಿವೆ. ಇತ್ತ ಸುಹಾಸ್ ಶೆಟ್ಟಿಯ ಇನ್ನೊವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.