ಪುತ್ತೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದ.ಕ. ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಬಹುತೇಕ ಬಸ್ ಗಳ ಓಡಾಟ ಕಡಿಮೆಯಾಗಿದೆ.
ಬಂದ್ ಕರೆ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಕೆಲಸಕ್ಕೆ ತೆರಳುತ್ತಿದ್ದ ಹಲವಾರು ಮಂದಿ ನಗರಕ್ಕೆ ಬಂದು ಹಿಂದಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಪುಣಚ, ಬೆಟ್ಟಂಪಾಡಿ ಮುಂತಾದ ಗ್ರಾಮಾಂತರ ಕಡೆಗಳಿಂದ ನಗರಕ್ಕೆ ಬರುವ ಹಲವಾರು ಬಸ್ ಗಳು ಸಾಲುಸಾಲಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಠಿಕಾಣಿ ಹೂಡಿವೆ ಎಂದು ತಿಳಿದು ಬಂದಿದೆ.
ಮಂಗಳೂರಿಗೆ ಬಸ್ಸಿಲ್ಲ :
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು ಮಂಗಳೂರಿಗೆ ತೆರಳುವ ಒಂದೇ ಒಂದು ಬಸ್ ಇಲ್ಲ ಎನ್ನುವುದನ್ನು ತಿಳಿದು, ಗೊಂದಲಕ್ಕೆ ಒಳಗಾದರು. ಇದೇ ವೇಳೆ, ಕೆ.ಎಸ್.ಆರ್.ಟಿ.ಸಿ. ಮಂಗಳೂರಿಗೆ ಬಸ್ಸಿ ಬಿಡಲಾಗುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ ಎನ್ನಲಾಗಿದೆ.
ಮಡಿಕೇರಿಯಿಂದ ಬಸ್ ಆಗಮಿಸಿದ್ದು, ಕೆಲವರು ಬಸ್ ಹತ್ತಿದರು. ಜಿಲ್ಲೆಯಲ್ಲಿ ಸಂಚಾರ ಇಲ್ಲದೇ ಇರುವುದರಿಂದ ಬಸ್ ಎಲ್ಲಿವರೆಗೆ ಹೋಗುತ್ತದೆಯೋ, ಅಲ್ಲಿವರೆಗೆ ಮಾತ್ರ ಹೋಗುವುದಾಗಿ ಕಂಡಕ್ಟರ್ ತಿಳಿಸಿದರು. ಉಳಿದ ಕಡೆಗಳಿಗೆ ಬಸ್ ಬಿಡಲಾಗುವುದು ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.