ಗುರುವಾರ ರಾತ್ರಿ ಬಜಪೆ ಸಮೀಪ ನಡುರಸ್ತೆಯಲ್ಲಿ ಕಾರು ಅಡ್ಡಗಟ್ಟಿ ತಲವಾರುಗಳಿಂದ ಕೊಚ್ಚಿ ಭೀಕರ ಹತ್ಯೆ
ಮಂಗಳೂರು: ಬಜಪೆಯ ಕಿನ್ನಿಪದವುನಲ್ಲಿ ಗುರುವಾರ ರಾತ್ರಿ ರೌಡಿಶೀಟರ್ ಮೂಲತಃ ಬೆಳ್ತಂಗಡಿಯ ನಿವಾಸಿ ಸುಹಾಸ್ ಶೆಟ್ಟಿ (32) ಎಂಬವನನ್ನು ತಂಡವೊಂದು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಬರ್ಬರ ಘಟನೆ ಹಿನ್ನೆಲೆ ಇಂದು ಮಂಗಳೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಬೆಳಗ್ಗಿನಿಂದಲೇ ಮಂಗಳೂರಿನಲ್ಲಿ ಬಂದ್ ಮಾದರಿಯ ವಾತಾವರಣ ಕಂಡುಬರುತ್ತಿದೆ. ಬಸ್‌ಗಳು ಓಡಾಟ ನಡೆಸುತ್ತಿಲ್ಲ. ಕೆಲವೇ ಖಾಸಗಿ ವಾಹನಗಳು ಮತ್ತು ಆಟೋರಿಕ್ಷಾಗಳು ಓಡಾಡುತ್ತಿವೆ. ಎಲ್ಲೆಡೆ ಬಿಗುವಿನ ವಾತಾವರಣ ಕಂಡುಬರುತ್ತಿದ್ದು, ಯಾವ ಕ್ಷಣ ಏನಾಗುವುದೋ ಎಂಬ ಭೀತಿಯಲಿ ಜನರಿದ್ದಾರೆ. ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದ್ದು, ಎಲ್ಲೆಡೆ ಬಿಗುವಿನ ವಾತಾವರಣವಿದೆ. ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಹತ್ಯೆ ನಡೆದದ್ದು ಹೀಗೆ
ಗುರುವಾರ ರಾತ್ರಿ 8.30ರ ವೇಳೆಗೆ ಸುಹಾಸ್ ಶೆಟ್ಟಿ ಕಳವಾರುನಿಂದ ಕಿನ್ನಿಪದವುಗೆ ಹೋಗುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಐದಾರು ಮಂದಿಯ ತಂಡ ಏಕಾಏಕಿ ದಾಳಿ ನಡೆಸಿ ತಲವಾರುಗಳಿಂದ ಮನಬಂದಂತೆ ಕಡಿದು ಸಾಯಿಸಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ. ಕಾರಿನಲ್ಲಿ ಸಹಚರರ ಜತೆ ಹೋಗುತ್ತಿದ್ದಾಗ ಕಾರು ಹಾಗೂ ಗೂಡ್ಸ್ ಟೆಂಪೋದಲ್ಲಿ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿದ್ದರು.

ಸಹಚರರಾದ ಸಂಜಯ್, ಪ್ರಜ್ವಲ್, ಅನ್ವಿತ್, ಲತೇಶ್, ಶಶಾಂಕ್ ಜತೆ ಕಾರಿನಲ್ಲಿ ಹೋಗುತ್ತಿದ್ದಾಗ ಸುಹಾಸ್ ಶೆಟ್ಟಿಯನ್ನು ಗುರಿಯಾಗಿಸಿ ತಲವಾರುಗಳಿಂದ ದಾಳಿ ನಡೆಸಲಾಗಿದೆ. 5 ರಿಂದ 6 ಮಂದಿಯ ತಂಡ ಕೊಲೆ ಮಾಡಿದೆ. ನಾಲ್ಕು ಮಂದಿ ನಡುರಸ್ತೆಯಲ್ಲಿ ಯದ್ವಾತದ್ವಾ ಕಡಿಯುತ್ತಿರುವ ದೃಶ್ಯ ವೀಡಿಯೊದಲ್ಲಿ ಕಾಣಿಸುತ್ತಿದೆ. ಸುಹಾಸ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆಸಿ ಆತ ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ದಾಳಿ ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಲೂನ್‌ಗೆ ನುಗ್ಗಿ ಸಲೂನ್ ಧ್ವಂಸಗೊಂಡಿದೆ. ಸುಹಾಸ್ ಶೆಟ್ಟಿಯ ಮೂವರು ಸಹಚರರಿಗೆ ಸಣ್ಣಪುಟ್ಟ ಗಾಯವಾಗಿದೆ.
ಈತ 2022 ಜುಲೈ 28ರಂದು ಸುರತ್ಕಲ್‌ನಲ್ಲಿ ನಡೆದಿದ್ದ ಪಾಝಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರ ಬಂದಿದ್ದ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ಪಾಝಿಲ್ ಹತ್ಯೆ ನಡೆದಿತ್ತು. ಸುಹಾಸ್ ಶೆಟ್ಟಿ ವಿರುದ್ಧ ಹಲವು ಕೊಲೆ, ಕೊಲೆಯತ್ನ ಪ್ರಕರಣ ದಾಖಲಾಗಿ, ರೌಡಿಶೀಟರ್ ತೆರೆಯಲಾಗಿತ್ತು. ಹಿಂದೆ ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದ. ಗೋವುಗಳ ರಕ್ಷಣೆಯಲ್ಲಿ ಪಾಲ್ಗೊಂಡಿದ್ದ.
ನಿನ್ನೆ ರಾತ್ರಿಯೇ ಆಸ್ಪತ್ರೆ ಸಮೀಪ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಸಹಿತ ಹಿಂದೂ ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಸಮೀಪ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಮಂಗಳೂರು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದರು. ಘಟನೆ ನಡೆದ ಬಜಪೆ, ಕಿನ್ನಿಪದವು, ಸುರತ್ಕಲ್ ಮೊದಲಾದ ಸೂಕ್ಷ್ಮ ಭಾಗಗಳಲ್ಲಿ ಹಾಗೂ ಮೃತದೇಹ ಇರಿಸಲಾಗಿರುವ ಆಸ್ಪತ್ರೆ ಸುತ್ತಮುತ್ತ ಬಿಗು ಭದ್ರತೆ ಏರ್ಪಡಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು.
ಸುಹಾಸ್ ಶೆಟ್ಟಿ ಮೇಲೆ ತಂಡ ನೆಡಸಿದ ತಲವಾರು ದಾಳಿ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ದಾರ್ಥ ಗೋಯೆಲ್ ಮೊದಲಾದ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.