100ಕ್ಕೂ ಹೆಚ್ಚು ವಿಮಾನಗಳು ವಿಳಂಬ, 40 ವಿಮಾನಗಳ ಮಾರ್ಗ ಬದಲು
ನವದೆಹಲಿ: ರಾಜಧಾನಿ ದೆಹಲಿ ಎನ್ಸಿಆರ್ನಲ್ಲಿ ಇಂದು ಬೆಳಗ್ಗಿನಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಅನೇಕೆ ಅನಾಹುತಗಳು ಸೃಷ್ಟಿಯಾಗಿವೆ. ನಜಾಫ್‌ಗಢ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಮನೆ ಕುಸಿದು ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಕೃಷಿ ಜಮೀನಿನಲ್ಲಿ ನಿರ್ಮಿಸಲಾದ ಮನೆಯ ಮೇಲೆ ಮರ ಬಿದ್ದು ಈ ದುರಂತ ಅಪಘಾತ ಸಂಭವಿಸಿದೆ.
ದೆಹಲಿಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಚಾರ ವ್ಯವಸ್ಥೆಯನ್ನೂ ಮಳೆ ಅಸ್ತವ್ಯಸ್ತಗೊಳಿಸಿದೆ. 40ಕ್ಕೂ ಅಧಿಕ ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ ಹಾಗೂ 100ಕ್ಕೂ ಅಧಿಕ ವಿಮಾನಗಳ ಸಂಚಾರ ವಿಳಂಬವಾಗಿದೆ.
ಮೃತರನ್ನು 26 ವರ್ಷದ ಜ್ಯೋತಿ ಮತ್ತು ಅವರ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಹಾಯದಿಂದ, ನಾಲ್ವರನ್ನೂ ಅವಶೇಷಗಳಿಂದ ಹೊರತೆಗೆದು ಜಾಫರ್‌ಪುರ ಕಲಾನ್‌ನ ಆರ್‌ಟಿಆರ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಜ್ಯೋತಿ ಅವರ ಪತಿ ಅಜಯ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ದೆಹಲಿಯಲ್ಲಿ ಹಠಾತ್ ಪ್ರತಿಕೂಲ ಹವಾಮಾನದಿಂದಾಗಿ ಭಾರತ ಹವಾಮಾನ ಇಲಾಖೆ (ಐಎಂಡಿ) ನಗರಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ನಗರದ ಹಲವಾರು ಭಾಗಗಳಲ್ಲಿ ನೀರು ನಿಂತಿರುವುದು ಮತ್ತು ಮರಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ. ಅಕಾಲಿಕ ಮಳೆಯಿಂದಾಗಿ, ದೆಹಲಿಯ ಅನೇಕ ಸ್ಥಳಗಳಲ್ಲಿ ನೀರು ನಿಂತಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.