ಬೆಂಗಳೂರು: ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿಯವರ ಕ್ರೂರ ಹತ್ಯೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದು ಸರಳ ಕೊಲೆ ಅಲ್ಲ ಇದು ಪೂರ್ವನಿಯೋಜಿತ, ಸಂಘಟಿತ ಮತ್ತು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ನಡೆಯುತ್ತಿರುವ ನಿಶ್ಚಿತ ಯುದ್ಧ. ಈ ದುಷ್ಕೃತ್ಯವು ಕೇವಲ ಒಂದು ವ್ಯಕ್ತಿಯ ಮೃತ್ಯುವಲ್ಲ ಇದು ರಾಜ್ಯದ ನಂಬಿಕೆ, ಭದ್ರತೆ ಮತ್ತು ನ್ಯಾಯವ್ಯವಸ್ಥೆಯ ವಿರುದ್ಧ ನಡೆದ ಆಕ್ರಮಣ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹತ್ಯೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಿರುವ ದೃಶ್ಯಗಳಲ್ಲಿ, ಬುರ್ಖಾ ತೊಟ್ಟ ಮುಸ್ಲಿಂ ಮಹಿಳೆಯರು ದುಷ್ಕರ್ಮಿಗಳನ್ನು ತಪ್ಪಿಸಲು ನೇರವಾಗಿ ನೆರವಾದುದು ಸ್ಪಷ್ಟವಾಗಿದೆ. ಇವು ಅಚಾನಕ್ ಆಗಿ ಸಂಭವಿಸಿದ ಹತ್ಯೆಯಲ್ಲ. ಇದು ಬಹುದಿನಗಳ ಯೋಜನೆಯ ಫಲ. ಇಂತಹ ಸಂಘಟಿತ ಅಪರಾಧದ ಹಿಂದೆ ದೊಡ್ಡ ಕೈಗಳ ಸಹಾಯವಿಲ್ಲದೆ ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯದ ಗೃಹಸಚಿವರ ನಿರ್ಲಕ್ಷ್ಯ ಇನ್ನೂ ಆತಂಕಕಾರಿ. ಅವರು “ಹೋಮ್ ಮಿನಿಸ್ಟರ್” ಅಲ್ಲ ವೇಸ್ಟ್ ಮಿನಿಸ್ಟರ್. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕೈ ತಪ್ಪಿರುವಾಗಲೂ ಅವರು ಆಲಸ್ಯದಿಂದ ಕುಳಿತುಕೊಂಡಿದ್ದಾರೆ. ರಾಜ್ಯದ ಜನತೆ ಭಯದಿಂದ ಬದುಕುತ್ತಿದ್ದಾರೆ. ಯಾವಾಗ, ಎಲ್ಲಲ್ಲಿ ಗಲಾಟೆ ಉಂಟಾಗುತ್ತದೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ. ಇದು ಅವರ ಗುಪ್ತಚರ ಮಾಹಿತಿಯ ಕೊರತೆಯೇ ಅಲ್ಲ. ಇದು ಉದ್ದೇಶಪೂರ್ವಕ ನಿರ್ಲಕ್ಷ್ಯ ಉಡುಪಿಯಲ್ಲಿ ‘ಗಾರುಡ ಗ್ಯಾಂಗ್’ ನಡುವೆ ನಡೆದ ಗ್ಯಾಂಗ್ ವಾರ್ಸ್ ಕೂಡ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುವುದಕ್ಕೆ ತೋರಿಸುವ ಉದಾಹರಣೆ. ಚಾಕು-ಕತ್ತಿಗಳೊಂದಿಗೆ ರಸ್ತೆಯಲ್ಲಿ ಓಡಾಡುವ ಗ್ಯಾಂಗ್‌ಗಳಿಗೆ ಯಾರೂ ತಡೆಯಿಲ್ಲ. ಸರಕಾರ ಪೊಲೀಸರ ಕೈ ಕಟ್ಟಿರುವ ಕಾರಣ ಅವರು ಕೂಡ ಸುಮ್ಮನೆ ನೋಡಿಕೊಂಡು ಕುಳಿತಿದ್ದಾರೆ. ಜನಸಾಮಾನ್ಯರು ತಮ್ಮ ಊರಿನಲ್ಲಿ ಭಯದಿಂದ ಬದುಕುತ್ತಿದ್ದಾರೆ. ಇದು ಯಾವ ಸರ್ಕಾರಕ್ಕೂ ಗೌರವ ತರುವ ಸ್ಥಿತಿ ಅಲ್ಲ ಎಂದಿದ್ದಾರೆ.
ಇದೀಗ ಸುಹಾಸ್ ಶೆಟ್ಟಿಯವರ ಹತ್ಯೆ ಪ್ರಕರಣವನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು. ರಾಜ್ಯ ಸರ್ಕಾರದ ತನಿಖೆ ಮೇಲೆ ಯಾವುದೇ ನಂಬಿಕೆ ಇಲ್ಲ. ಸರ್ಕಾರದ ನೀತಿಗಳು ಮತ್ತು ಮಂತ್ರಿಗಳ ಹೇಳಿಕೆಗಳು ಇಂತಹ ಕ್ರೂರ ಅಪರಾಧಿಗಳಿಗೆ ಧೈರ್ಯ ತುಂಬುತ್ತಿದೆ. ಇದರ ಬಗ್ಗೆ ನಾನು ರಾಜ್ಯಪಾಲರಿಗೆ ಪತ್ರ ಬರೆದು ಈ ವಿಷಯದಲ್ಲಿ ತ್ವರಿತ ಹಾಗೂ ಕಠಿಣ ಕ್ರಮಕ್ಕಾಗಿ ಒತ್ತಾಯಿಸುತ್ತೇವೆ.
ರಾಜ್ಯದ ಗೃಹಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಇದು ಒಬ್ಬ ರಾಜಕಾರಣಿಯ ಬೇಡಿಕೆ ಅಲ್ಲ. ಇದು ಕರ್ನಾಟಕದ ಪ್ರತಿಯೊಬ್ಬ ಸಭ್ಯ ನಾಗರೀಕರ ಆಕ್ರೋಶದ ಘೋಷಣೆ. ಕರ್ನಾಟಕ ಪಶ್ಚಿಮ ಬಂಗಾಳವಾಗಬಾರದು. ರಾಜ್ಯದಲ್ಲಿ ಕಾನೂನು ಸುಯವಸ್ಥೆ ಪಾಲನೆ ಸರಿಯಾಗಿ ಆಗದೆ ಇದ್ದಲ್ಲಿ ಜನರೇ ದಂಗೆ ಎದ್ದು ನಿಂತರೆ ಬಹಳ ಕಷ್ಟವಾಗಲಿದೆ. ಆದುದರಿಂದ ಮುಖ್ಯಮಂತ್ರಿಗಳೇ, ನಿದ್ದೆಯಿಂದ ಎದ್ದೇಳಿ ಮತ್ತು ನಿಮ್ಮ ಗೃಹಸಚಿವರನ್ನು ಮನೆಗೆ ಕಳುಹಿಸಿ ಎಂದು ಆಕ್ರೋಶಿತರಾಗಿದ್ದಾರೆ.