ಪುತ್ತೂರು : ಪ್ರಸ್ತುತ ಕೂಡು ಕುಟುಂಬದ ಸವಿಯ ಸನ್ನಿವೇಶ ಕಡಿಮೆಯಾಗುತ್ತಿದ್ದು, ಇದು ಕಟು ವಾಸ್ತವವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಜೆಯ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ, ಮೌಲ್ಯಯುತವಾಗಿಸುವಲ್ಲಿ ನಿವೃತ್ತ ನೌಕರರಂತಹ ಸಂಘಟನೆ ಪೂರಕವಾಗಿದೆ ಎಂದು ವಿಶ್ರಾಂತ ಪ್ರೊಫೆಸರ್, ಸಾಹಿತಿ ತಾಳ್ತಂಜೆ ವಸಂತ ಕುಮಾರ್ ಅಭಿಪ್ರಾಯಪಟ್ಟವರು.
ಅವರು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಶ್ರೀಮಂತ ಮೌಲ್ಯದ ಅನುಭವ ಸಂಜೆಗಣ್ಣಿಗೆ ಸಿಗುವಂತದ್ದು. ಹಿರಿಯರ ಬಾಲ್ಯದ ಅನುಭವ ಮೌಲ್ಯಾಂತರವಾಗಿದೆ ಎಂದ ಅವರು, ಡಾ.ಎಂ.ಪ್ರಭಾಕರ ಜೋಶಿ ಅವರು ಐಚ್ಛಿಕ ನೆಲೆಯ ವಾಗ್ಮಿ. ಈ ನಿಟ್ಟಿನಲ್ಲಿ ಅವರಿಗೆ ಉತ್ತಮ ಪ್ರಶಸ್ತಿ ನೀಡುವ ಮೂಲಕ ಸಂಘಟನೆ ದಾಯಿತ್ವ ಪೂರೈಸಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಯಕ್ಷಗಾನ ಅರ್ಥಗಾರಿಕೆ ಜಗತ್ತಿನಲ್ಲಿ ವಿಶಿಷ್ಟ ಕಲೆ ಜತೆಗೆ ತಾಳಮದ್ದಳೆಯೂ ವಿಶಿಷ್ಟತೆಯನ್ನು ಪಡೆದಿದೆ. ತಾಳಮದ್ದಳೆ ಕಲೆಯನ್ನು ವಿಸ್ತಾರ ಮಾಡಲು ತುಂಬಾ ಸಾಧ್ಯತೆಗಳಿವೆ. ಇಂದು ನನಗೆ ಪ್ರಶಸ್ತಿ ವಿಶಾಲ ಸಮಾಜದ ವಿಶಾಲ ಮನೊಭಾವದಿಂದ ಸಿಕ್ಕಿದೆ ಎಂದ ಅವರು, ಯಕ್ಷಗಾನದಲ್ಲಿ ಆಗಬೇಕಾದ ಕೆಲಸ ತುಂಬಾ ಇದೆ ಎಂದು ಹೇಳಿ ಸಂಘಟನೆಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಸಂಘಕ್ಕೆ 25 ಸಾವಿರ ರೂ. ಧನಸಹಾಯ ನೀಡಿದವರನ್ನು ಗೌರವಿಸಲಾಯಿತು. 90, 85, 80 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ 75 ವರ್ಷ ಪೂರೈಸಿದ ಹಿರಿಯರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಡಾ.ಸಾಜಿದಾಬಾನು, ಸುಜಿತ್, ಶುಭದ ಆರ್.ಪ್ರಕಾಶ್, ಹಾರ್ದಿಕ್ ಹೆಚ್್ . ಶೆಟ್ಟಿ ಲಹರಿ ಹಾಗೂ ದಿನೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್ ಪಿ., ಕೋಶಾಧಿಕಾರಿ ಸೂರಪ್ಪ ಗೌಡ, ಉಪಾಧ್ಯಕ್ಷೆ ಪ್ರೊ.ಎಂ.ವತ್ಸಲಾರಾಜ್ಞಿ, ಜತೆ ಕಾರ್ಯದರ್ಶಿ ಎನ್.ಶಶಿಕಲಾ, ಸಂಘಟನಾ ಕಾರ್ಯದರ್ಶಿ ಬಿ.ಜಗನ್ನಾಥ ರೈ ಉಪಸ್ಥಿತರಿದ್ದರು.
ಸಂಘದ ಸದಸ್ಯ ಝೇವಿಯರ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.