ಪುತ್ತೂರು: ಪುತ್ತೂರಿನಲ್ಲಿ ಹಿಂದೂ ಧರ್ಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈಗಾಗಲೇ ಗ್ರಾಮ ಸಹಿತ ತಾಲೂಕು ಸಮಿತಿಗಳನ್ನು ರಚಿಸಲಾಗಿದ್ದು, ಮೇ ೫ ರಂದು ಅಪರಾಹ್ನ 3 ಗಂಟೆಗೆ ಹಿಂದೂ ಧರ್ಮ ಶಿಕ್ಷಣ ತರಗತಿಗೆ ಶೃಂಗೇರಿಯಲ್ಲಿ ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಮ್ಮ ಅಮೃತ ಹಸ್ತದಿಂದ ಚಾಲನೆ ನೀಡಲಿದ್ದಾರೆ ಎಂದು ತಾಲೂಕು ಸಮಿತಿ ಉಪಾಧ್ಯಕ್ಷ ಆರ್.ಸಿ.ನಾರಾಯಣ ತಿಳಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರು ಧಾರ್ಮಿಕ ಶಿಕ್ಷಣದ ಕೇಂದ್ರವಾಗಬೇಕು. ಈ ಮೂಲಕ ಕರ್ನಾಟಕದಾದ್ಯಂತ ಶಿಕ್ಷಣದ ಮಹತ್ವ ಪಸರಿಸಬೇಕು. ಇದರಲ್ಲಿ ಪಕ್ಷ-ಜಾತಿ, ರಾಜಕೀಯ ಇರಬಾರದು ಎಂಬುದು ನಮ್ಮ ಆಶಯವಾಗಿದೆ ಎಂದ ಅವರು, ಹಿಂದೂ ಧರ್ಮದ ಮೇಲೆ ನಿರಂತರ ದೌರ್ಜನ್ಯಗಳು ಕಂಡು ಬರುತ್ತಿದೆ. ಮತ್ತೊಂದೆಡೆ ಮತಾಂತರ, ಲವ್ ಜಿಹಾದ್ ಈ ರೀತಿಯ ಹಲವು ಶೋಷಣೆಗಳು ಹಿಂದೂ ಧರ್ಮದ ಮೇಲೆ ನಡೆಯುತ್ತಿದೆ. ಇದಕ್ಕೆ ಧರ್ಮ ಶಿಕ್ಷಣದ ಕೊರತೆ ಒಂದು ಕಾರಣವಾಗಿದೆ. ಆದ್ದರಿಂದ ಪ್ರತಿಯೊಂದು ಕಾರ್ಯಗಳು ಧರ್ಮದ ಆಧಾರದಲ್ಲಿ ನಡೆದರೆ ಯಶಸ್ಸು ಸಾಧ್ಯ. ಈಗಾಗಲೇ ತಾಲೂಕಿನ ವಿವಿಧ ಭಜನಾ ಮಂಡಗಳಿಗಳನ್ನು ಸಂಪರ್ಕಿಸಲಾಗಿದೆ. ೨೦ ರಿಂದ ೨೨ ಸಮಿತಿಗಳನ್ನು ರಚಿಸಲಾಗಿದೆ. ಪುತ್ತೂರು ಹಾಗೂ ಕಡಬ ಅವಿಭಜಿತ ತಾಲೂಕನ್ನು ಸೇರಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ವಿಶ್ವ ವಿದ್ಯಾನಿಲಯಗಳ ರೀತಿಯಲ್ಲಿ ಧರ್ಮ ಶಿಕ್ಷಣ ಸಿಗುವಂತಾಗಬೇಕು ಎಂದು ಹೇಳಿದರು.
ಹಿಂದೂ ಧರ್ಮ ಶಿಕ್ಷಣ ಸಮಿತಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶೃಂಗೇರಿಯಲ್ಲಿ ನಡೆಯಲಿರುವ ಹಿಂದೂ ಧರ್ಮ ಶಿಕ್ಷಣ ತರಗತಿ ಉದ್ಘಾಟನೆಯಲ್ಲಿ ಭಾಗವಹಿಸಲು ಪುತ್ತೂರು, ಕಡಬ ಗ್ರಾಮ ಸಮಿತಿ ಪದಾಧಿಕಾರಿಗಳಲ್ಲದೆ ಹಿಂದೂ ಧರ್ಮದ ಎಲ್ಲಾ ಅಭಿಮಾನಿಗಳು ಪಾಲ್ಗೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಸಾವಿರಾರು ಮಂದಿ ಶೃಂಗೇರಿಯ ಭಕ್ತರು, ವಿವಿಧ ಭಾಗಗಳ ಭಜನಾ ಮಂಡಳಿಗಳ ಸದಸ್ಯರು, ಧಾರ್ಮಿಕ ಸಂಘಟನೆಗಳ ಸದಸ್ಯರು, ಧರ್ಮಶಿಕ್ಷಣದ ಆಸಕ್ತರು, ಧರ್ಮಾಭಿಮಾನಿಗಳನ್ನು ತಾಲೂಕು ಧರ್ಮ ಶಿಕ್ಷಣ ಸಮಿತಿಯ ವತಿಯಿಂದ ಉಚಿತವಾಗಿ ಶೃಂಗೇರಿಗೆ ಕರೆದೊಯ್ಯಲಾಗುತ್ತದೆ. ಈಗಾಗಲೇ ೫೦ ಬಸ್ ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಊಟೋಪಹಾರದ ವ್ಯವಸ್ಥೆಯನ್ನೂ ಉಚಿತವಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ದಂಬೆಕಾನ, ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಖಜಾಂಚಿ ಮಾಧವ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಕಾರ್ಯಕರ್ತ ದಿನೇಶ್ ಜೈನ್ ಉಪಸ್ಥಿತರಿದ್ದರು.
ಧರ್ಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶೃಂಗೇರಿಯಲ್ಲೇ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ. ಸದ್ಯದಲ್ಲೇ ಅದು ಗುರುಗಳ ಅಂತಿಮ ಮುದ್ರೆಯೊಂದಿಗೆ ಅದು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಮೂಲಕ ಪ್ರತಿ ಗ್ರಾಮ ಸಮಿತಿಗಳಿಗೆ ತಲಪಲಿದೆ. ಆಯಾ ಗ್ರಾಮ ಸಮಿತಿಯ ವತಿಯಿಂದ ಧರ್ಮ ಶಿಕ್ಷಣಕ್ಕೆ ಶಿಕ್ಷಕರನ್ನೂ ಗುರುತಿಸಲಾಗುತ್ತಿದೆ. ಗುರುತಿಸಿದ ಎಲ್ಲಾ ಶಿಕ್ಷಕರಿಗೆ ಶೃಂಗೇರಿ ಮಠದಿಂದಲೇ ಕಾರ್ಯಾಗಾರ ನಡೆಸಿ ಧರ್ಮ ಶಿಕ್ಷಣವನ್ನು ನಡೆಸುವ ಬಗೆಗೆ ಹೆಚ್ಚಿನ ತಜ್ಞತೆಯನ್ನು ಒದಗಿಸಿಕೊಡಲಾಗುತ್ತದೆ.
ಸುಬ್ರಹ್ಮಣ್ಯ ನಟ್ಟೋಜ, ಹಿಂದೂ ಧರ್ಮ ಶಿಕ್ಷಣ ಸಮಿತಿ ಸಂಚಾಲಕರು.