ಇನ್ಸ್ಪೆಕ್ಟರ್ ವಿರುದ್ಧ ಕರ್ತವ್ಯ ಲೋಪ ಆರೋಪ – ಉನ್ನತ ತನಿಖೆಗೆ ಒತ್ತಾಯ
ಮಂಗಳೂರು: ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾಣದ ಸಮೀಪ ಕೊಲೆಯಾದ ಕೇರಳದ ಯುವಕನ ಶವವನ್ನು ಆತನ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲಪಳ್ಳಿ ನಿವಾಸಿಯಾಗಿದ್ದ ಯುವಕ ಅಶ್ರಫ್ ಎಂಬಾತ ಏ.27ರಂದು ಯುವಕರ ಗುಂಪಿನ ಹೊಡೆತಕ್ಕೆ ಸಿಕ್ಕಿ ಸಾವಿಗೀಡಾಗಿದ್ದಾನೆ. ಮಂಗಳೂರಿನ ವೆನ್‌ಲಾಕ್ ಶವಾಗಾರದಲ್ಲಿದ್ದ ಅಶ್ರಫ್‌ನ ಮೃತದೇಹವನ್ನು ಅವನ ಕುಟುಂಬಸ್ಥರು ಗುರುತಿಸಿ ಪೊಲೀಸರಿಂದ ಪಡೆದುಕೊಂಡಿದ್ದಾರೆ.
ಮಧ್ಯರಾತ್ರಿ ಕೇರಳದಿಂದ ಆಗಮಿಸಿದ ಅಶ್ರಫ್‌ನ ಸಹೋದರ ಮತ್ತು ಕುಟುಂಬಸ್ಥರು ಶವದ ಗುರುತು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಅಶ್ರಫ್ ಎಂದು ಖಚಿತಪಡಿಸಿದ ಬಳಿಕ ಪೊಲೀಸರು ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ವೇಳೆ ಮಂಗಳೂರಿನ ಕಾಂಗ್ರೆಸ್ ನಾಯಕರು ಮತ್ತು ಮುಸ್ಲಿಂ ಮುಖಂಡರು ಶವಾಗಾರದಲ್ಲಿ ಇದ್ದರು.
ಭಾನುವಾರ ಮಧ್ಯಾಹ್ನ 3.30ಕ್ಕೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನ ಬಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿ ಮೈದಾನಕ್ಕೆ ಬಂದು ಪಾಕಿಸ್ಥಾನ ಜಿಂದಾಬಾದ್ ಎಂದು ಕೂಗಿದಾಗ ಯುವಕರು ಸೇರಿ ಥಳಿಸಿದ್ದಾರೆ. ಇದರಿಂದ ಆತ ಸಾವನ್ನಪ್ಪಿದ್ದಾನೆ. ಅದೇದಿನ ಸಂಜೆ ಸುಮಾರು 5.30ರ ವೇಳೆಗೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿತ್ತು. ಅಪರಿಚಿತ ವ್ಯಕ್ತಯಾಗಿದ್ದ ಕಾರಣ ಆತ ಯಾರೆಂದು ತಿಳಿಯದೆ ತನಿಖೆ ವಿಳಂಬವಾಗಿತ್ತು.
ಇನ್ಸ್‌ಪೆಕ್ಟರ್ ವಿರುದ್ಧ ಕರ್ತವ್ಯ ಲೋಪ ಆರೋಪ
ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿಬಂದಿದ್ದು, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದೆ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಮೃತದೇಹದ ಮೇಲೆ ಗಂಭೀರ ಗಾಯಗಳು ಕಂಡುಬಂದರೂ, ಇನ್ಸ್‌ಪೆಕ್ಟರ್ ಶಿವಕುಮಾರ್ ಈ ಪ್ರಕರಣವನ್ನು ಕೊಲೆಯೆಂದು ದಾಖಲಿಸದೆ, ಯುಡಿಆರ್ (ಅಸಹಜ ಮರಣ) ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ ಎಂದು ಆರೋಪವಿದೆ. ಈ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗೃಹ ಸಚಿವ ಜಿ. ಪರಮೇಶ್ವರ್‌ಗೆ ಪತ್ರ ಬರೆದು, ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಈ ಪ್ರಕರಣದ ಉನ್ನತ ಮಟ್ಟದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆಯೂ ಪತ್ರದಲ್ಲಿ ಕೋರಿದ್ದಾರೆ.
ಪೊಲೀಸರು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರನ್ನು ಬಂಧಿಸಿದ್ದಾರೆ. ಇನ್ನಷ್ಟು ಮಂದಿ ಶಾಮೀಲಾಗಿರುವ ಶಂಕೆಯಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಘಟನೆಯು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೊಲೆಯಾದ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸ್ಥಳೀಯ ನಾಯಕರು ಮತ್ತು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.