ಕೊನೆಗೂ ಕುಡುಪು ಕೊಲೆ ರಹಸ್ಯ ಬೇಧಿಸಿದ ಪೊಲೀಸರು
ಮಂಗಳೂರು : ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನ ಸಮೀಪ ಅಪರಿಚಿತ ಯುವಕನ್ನು ಹೊಡೆದು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ 20 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವಾಗ ಈ ವ್ಯಕ್ತಿ ಮಧ್ಯೆ ಬಂದು ಕಿರಿಕ್ ಮಾಡಿದಾಗ ಯುವಕರ ಗುಂಪು ಕೆರಳಿ ಅವನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಈ ಹೊಡೆತಗಳಿಂದ ಸಾವು ಸಂಭವಿಸಿದೆ ಎಂದು ವಿಧಿವಿಜ್ಞಾನ ವರದಿ ದೃಢಪಡಿಸಿದೆ. ಏ.27ರಂದು ಸಂಜೆ ನಿರ್ಜನ ಸ್ಥಳದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಯುವಕನನ್ನು ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲಪ್ಪಳ್ಳಿ ಎಂಬಲ್ಲಿನ ಆಶ್ರಫ್ ಎಂದು ಗುರುತಿಸಲಾಗಿದೆ ಎಂಬುದಾಗಿ ಮಂಗಳೂರು ಪೊಲೀಸ್ ಆಯುಕ್ತ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮೃತನ ಗುರುತು ಪತ್ತೆ ಹಚ್ಚುವ ಸಲುವಾಗಿ ಫೋಟೊಗಳನ್ನು ವ್ಯಾಪಕವಾಗಿ ಹಂಚಲಾಗಿತ್ತು. ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಸಾಕ್ಷಿದಾರರು ಮತ್ತು ಅನುಮಾನಿತ ವ್ಯಕ್ತಿಗಳನ್ನು ವಿಚಾರಣೆ ಮಾಡುವ ಮತ್ತು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್/ಟವರ್ ಡಂಪ್ ಡೇಟಾ ಸಂಗ್ರಹಿಸಿ ವಿಶ್ಲೇಷಿಸಲು ಹಲವು ತಂಡಗಳನ್ನು ರಚಿಸಲಾಗಿತ್ತು. ಕೊನೆಗೂ ಮೂರು ದಿನಗಳ ಬಳಿಕ ಕೊಲೆಯ ಪ್ರಾಥಮಿಕ ಸುಳಿವುಗಳನ್ನು ಪಡೆಯಲು ಸಾಧ್ಯವಾಯಿತು. ಬೆನ್ನಿನ ಭಾಗಕ್ಕೆ ಬಹಳಷ್ಟು ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ದೃಢಪಡಿಸಿದೆ.
ಏ.27ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ ಈ ವ್ಯಕ್ತಿ ಅಲ್ಲಿಗೆ ಹೋಗಿ ಕಿರಿಕ್ ಮಾಡಿದ್ದಾನೆ. ಆಗ ಕೆಲವರು ಗುಂಪು ಸೇರಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ಯದ್ವಾತದ್ವಾ ತುಳಿದು ಹಲ್ಲೆ ನಡೆಸಿದ್ದು, ಈ ಸಮಯ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆತ ಪಾಕಿಸ್ಥಾನ್ ಜಿಂದಾಬಾದ್ ಕೂಗಿದ ಕಾರಣ ಕ್ರಿಕೆಟ್ ಆಡುತ್ತಿದ್ದ ಯುವಕರು ಕೆರಳಿದ್ದಾರೆ ಎಂದು ಸ್ಥಳೀಯರು ಹೇಳಿದ್ದರೂ ಪೊಲೀಸರು ಇದನ್ನು ದೃಢಪಡಿಸಿಲ್ಲ.
ದೀಪಕ್ ಕುಮಾರ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಸಚಿನ್ ಟಿ (26), ದೇವದಾಸ್ (50), ಮಂಜುನಾಥ್ (32), ಸಾಯಿದೀಪ್ (29), ನಿತೇಶ್ ಕುಮಾರ್ ಅಲಿಯಾಸ್ ಸಂತೋಷ್ (33), ದೀಕ್ಷಿತ್ ಕುಮಾರ್ (32), ಸಂದೀಪ್ (23), ವಿವಿಯನ್ ಆಳ್ವಾರೀಸ್ (41), ಶ್ರೀದತ್ತ (32), ರಾಹುಲ್ (23), ಪ್ರದೀಪ್ ಕುಮಾರ್ (35), ಮನೀಷ್ ಶೆಟ್ಟಿ (21), ಧನುಷ್ (31), ದೀಕ್ಷಿತ್ (27), ಕಿಶೋರ್ ಕುಮಾರ್ (37), ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಮತ್ತು ಆದರ್ಶ್ ಎಂಬವರನ್ನು ಬಂಧಿಸಲಾಗಿದೆ. ಬಂಧಿತೆರೆಲ್ಲ ಕುಡುಪು ಸುತ್ತಮುತ್ತಲಿನ ಪರಿಸರದ ಯುವಕರು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.