ಕೋಲ್ಕತ್ತಾ: ಕೋಲ್ಕತ್ತಾದ ಬುರ್ರಾಬಜಾರ್ನಲ್ಲಿರುವ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 15 ಮಂದಿ ಜೀವಂತ ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ. ಅನೇಕ ಮಂದಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಣ್ಣಿನ ಮಾರುಕಟ್ಟೆ ಪ್ರದೇಶದಲ್ಲಿರುವ ಹೋಟೆಲ್ ರಿತುರಾಜ್‌ನಲ್ಲಿ ನಿನ್ನೆ ರಾತ್ರಿ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹೋಟೆಲ್ ಸಿಬ್ಬಂದಿಯೊಬ್ಬರು ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾರೆ. ಹೋಟೆಲ್‌ನಿಂದ 15 ಶವಗಳನ್ನು ಹೊರತೆಗೆಯಲಾಗಿದ್ದು, ಹಲವರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮನೋಜ್ ವರ್ಮಾ ತಿಳಿಸಿದ್ದಾರೆ.
ಕೋಲ್ಕತ್ತ ನಗರದ ಹಳೆ ಮತ್ತು ಅತಿಹೆಚ್ಚು ಜನನಿಬಿಢವಾಗಿರುವ ಬಡಾವಣೆಯಲ್ಲಿ ಒಂದಾಗಿರುವ ಬುರ್ರಾಬಜಾರ್ನ ಮದನಮೋಹನ ರಸ್ತೆಯಲ್ಲಿರುವ ಆರು ಅಂತಸ್ತುಗಳ ಹೋಟೆಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕೆಲವು ಮಂದಿ ಬೆಂಕಿ ಜ್ವಾಲೆಗೆ ಸಿಲುಕಿ ಜೀವಂತ ದಹಿಸಿದರೆ ಕೆಲವರು ಹೊಗೆಯಿಂದ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಹೆಚ್ಚಿನವರು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹತ್ತಿಕೊಂಡ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹಿತ ಹಲವು ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.