ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಬಸವೇಶ್ವರ ಜಯಂತಿ ಆಚರಣೆ ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ತಹಸೀಲ್ದಾರ್ ಪುರಂದರ ಹೆಗ್ಡೆ ಬಸವೇಶ್ವರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಹುಟ್ಟಿದ ಬಸವೇಶ್ವರರು ವೀರಶೈವ ಪ್ರತಿಪಾದಕರು. ಇಂತಹಾ ವೀರಶೈವ ಜನಾಂಗದವರು ಕರ್ನಾಟಕದಲ್ಲಿ ಕಡಿಮೆಯಿದ್ದರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಸವೇಶ್ವರರು ಸಮಾಜದಲ್ಲಿರುವ ಸಮಾನತೆ, ಜಾತಿ-ಮತ ಬೇಧಗಳನ್ನು ತೊಡೆದು ಹಾಕುವ ಕುರಿತು ತನ್ನ ವಚನಗಳಲ್ಲಿ ತಿಳಿ ಹೇಳಿದ್ದಾರೆ. ಕಾಯಕವೇ ಕೈಲಾಸ ಎಂದು ಸಾರಿದವರು. ಕವಿಗಳಲ್ಲಿ ದಾರ್ಶನಿಕರಾಗಿದ್ದವರು. ಇಂದಿಗೂ ಅವರ ಜಯಂತಿ ಆಚರಣೆ ಮಾಡಬೇಕಾದರೆ ಅವರ ಮಹತ್ವ ಎಂತಹದ್ದಾಗಿರಬೇಕು. ಈ ನಿಟ್ಟಿನಲ್ಲಿ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ವೇದಿಕೆಯಲ್ಲಿ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸರಕಾರಿ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕು ಕಚೇರಿ ದ್ವಿತಿಯ ದರ್ಜೆ ಸಿಬ್ಬಂದಿ ದಯಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.