ಅನ್ನಭಾಗ್ಯದ ಅಕ್ಕಿಯನ್ನು ಪಾಲಿಷ್ ಮಾಡಿ ಮಾರಾಟ ಮಾಡುತ್ತಿರುವ ಶಂಕೆ
ಮಂಗಳೂರು: ಮಂಗಳೂರಿನ ಖಾಸಗಿ ಗೋಡೌನ್ ಒಂದರಲ್ಲಿ ನೂರಾರು ಮೂಟೆ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಮಂಗಳೂರು ನಗರದ ಬಂದರು ಸಮೀಪದ ಅಕ್ಕಿ ದಾಸ್ತಾನು ಗೋಡೌನ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿನಲ್ ಸೂಚನೆಯಂತೆ ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರು ದಾಳಿ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಸುಮಾರು 500 ಕ್ವಿಂಟಾಲ್ ಅಕ್ಕಿ ಅಕ್ರಮ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ. ಇದು ಅನ್ನಭಾಗ್ಯದ ಅಕ್ಕಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಉತ್ತರ ಕರ್ನಾಟಕ ಭಾಗದಿಂದ ಅನ್ನಭಾಗ್ಯದ ಅಕ್ಕಿ ತಂದು ಅಕ್ರಮವಾಗಿ ದಾಸ್ತಾನು ಇರಿಸಿರುವ ಆರೋಪ ಕೇಳಿಬಂದಿದ್ದು, ದಾಳಿ ಮಾಡಿದ ಅಧಿಕಾರಿಗಳು ಗೋಡೌನ್ ಸೀಜ್ ಮಾಡಿದ್ದಾರೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಅನಿತಾ ಮಾಹಿತಿ ನೀಡಿದ್ದಾರೆ.
ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟ ಮಾಫಿಯಾ ಸಕ್ರಿಯವಾಗಿರುವ ಅನುಮಾನವಿದೆ. ದಲ್ಲಾಳಿಗಳ ಮೂಲಕ ಅಕ್ರಮವಾಗಿ ಅಕ್ಕಿ ಖರೀದಿಸಿ ಮಂಗಳೂರಿನ ಕೆಲ ಖಾಸಗಿ ರೈಸ್ ಮಿಲ್‌ಗಳಿಗೆ ಸಾಗಾಟ ಮಾಡುತ್ತಿರುವ ಶಂಕೆಯಿದೆ. ಬಳಿಕ ಫಾಲಿಶ್ ಮಾಡಿ ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಪೂರೈಕೆ ಮಾಡುವ ಮಾಫಿಯಾ ಕಾರ್ಯಚರಿಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಹೀಗಾಗಿ ಗೋಡೌನ್ನಲ್ಲಿದ್ದ ವಿವಿಧ ಅಕ್ಕಿಗಳ ಮಾದರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ್ದಾರೆ.