ಕೋಮು ವೈಷಮ್ಯಕ್ಕೆ ಎಡೆಮಾಡಿಕೊಡದಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮನವಿ
ಮಂಗಳೂರು : ಮಂಗಳೂರಿನ ಹೊರವಲಯದ ಕುಡುಪು ಬಳಿ ಯುವಕನನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಂತ್ಯಂತ ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಕ್ರಿಕೆಟ್ ಆಟ ಆಡುವ ವೇಳೆ ಆಟಗಾರರು ಹಾಗೂ ಅನ್ಯ ಕೋಮಿನ ಯುವಕನ ನಡುವೆ ಮಾತಿನ ಚಕಮಕಿ ನಡೆದು, ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಈ ರೀತಿಯ ಘಟನೆಗಳು ಕೋಮು ವೈಷಮ್ಯವನ್ನು ಉಂಟು ಮಾಡುತ್ತವೆ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ಪ್ರಕರಣ ಕುರಿತು ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸೂಕ್ತ ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಕೋಮು ಸೌಹಾರ್ದ ಹಾಗೂ ಶಾಂತಿ ಕಾಪಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕುಡುಪು ಸಮೀಪ ನಿರ್ಜನ ಸ್ಥಳದಲ್ಲಿ ಭಾನುವಾರ ಸಂಜೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ದೇಹದ ಮೇಲೆ ಗಾಯದ ಗುರುತುಗಳಿದ್ದ ಕಾರಣ ಮೇಲ್ನೋಟಕ್ಕೆ ಹಲ್ಲೆ ಮಾಡಿ ಸಾಯಿಸಿರುವಂತೆ ಕಂಡುಬಂದಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಿಂದ ಸಾವು ಸಂಭವಿಸಿರುವುದು ದೃಢಪಟ್ಟ ಬಳಿಕ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.