ರೌಂಡ್ ರಾಬಿನ್ ಸ್ವರೂಪದಲ್ಲಿ ಒಟ್ಟು 94 ಪಂದ್ಯ ಆಡಿಸಲು ತೀರ್ಮಾನ
ಮುಂಬಯಿ: ಐಪಿಎಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲು ಬಿಸಿಸಿಐ ನಿರ್ಧರಿಸಿದೆ. ಇನ್ನಷ್ಟು ಹೆಚ್ಚು ಪಂದ್ಯಗಳನ್ನು ಆಡಿಸುವುದರ ಜೊತೆಗೆ ಪಂದ್ಯದ ಮಾದರಿಯನ್ನು ಬದಲಾಯಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಬಾರಿಯ ಐಪಿಎಲ್ ಲೀಗ್ ಹಂತದಲ್ಲಿ 70 ಪಂದ್ಯಗಳನ್ನಾಡಲಾಗುತ್ತದೆ. ಆದರೆ 21ನೇ ಸೀಸನ್ ಐಪಿಎಲ್ನಲ್ಲಿ ಈ ಸಂಖ್ಯೆಯು 90ಕ್ಕೇರಲಿದೆ. ಅಲ್ಲದೆ ಒಟ್ಟು 94 ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಐಪಿಎಲ್ ಪಂದ್ಯಗಳ ವಿಸ್ತರಣೆಗೆ ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.
2028ರಿಂದ ಹೆಚ್ಚುವರಿ 20 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಈ ಹಿಂದೆಯೇ ಐಪಿಎಲ್ ಪಂದ್ಯಗಳ ಹೆಚ್ಚಳದ ಬಗ್ಗೆ ಬಿಸಿಸಿಐ ಚರ್ಚಿಸಿತ್ತು. ಅದರಂತೆ ಐಪಿಎಲ್ 2025 ಮತ್ತು 2026ರಲ್ಲಿ 84 ಪಂದ್ಯಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿತ್ತು. 2027ರಲ್ಲಿ ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು 94ಕ್ಕೇರಿಸಲು ಚಿಂತಿಸಲಾಗಿತ್ತು.
ಆದರೆ ಈ ಯೋಜನೆಯು ಈ ಬಾರಿಯ ಐಪಿಎಲ್ನಲ್ಲಿ ಕಾರ್ಯಗತವಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಆಟಗಾರರ ವಿಂಡೋ ಅಂದರೆ ಪಂದ್ಯಗಳ ಹೆಚ್ಚಳದಿಂದಾಗಿ ವಿದೇಶಿ ಆಟಗಾರರು ಅಲಭ್ಯರಾಗುವ ಸಾಧ್ಯತೆಗಳಿದ್ದವು. ಆದರೀಗ 2028ರಿಂದ 74 ಪಂದ್ಯಗಳ ಬದಲಿಗೆ 94 ಪಂದ್ಯಗಳನ್ನು ಆಯೋಜಿಸಲು ಚರ್ಚಿಸಿರುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ ಅಧ್ಯಕ್ಷ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.
2028ರಿಂದ ಐಪಿಎಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಇಲ್ಲಿ ಪ್ರತಿ ತಂಡ 18 ಪಂದ್ಯಗಳನ್ನಾಡಲಿದೆ. 9 ಪಂದ್ಯಗಳು ಹೋಮ್ ಗ್ರೌಂಡ್ನಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಬೇರೆ ಮೈದಾನದಲ್ಲಿ ಜರುಗಲಿವೆ. ಈ ಮೂಲಕ ಲೀಗ್ ಹಂತದಲ್ಲಿ ಪ್ರತಿ ತಂಡ 18 ಪಂದ್ಯಗಳನ್ನಾಡಲಿದೆ.
ಪ್ರಸ್ತುತ ಐಪಿಎಲ್ ಕೂಡ ರೌಂಡ್ ರಾಬಿನ್ ಮಾದರಿಯಲ್ಲೇ ನಡೆಯುತ್ತಿದೆ. ಆದರೆ ಪ್ರತಿ ತಂಡ 4 ಮ್ಯಾಚ್ಗಳನ್ನು ಕಡಿಮೆ ಆಡುತ್ತಿದೆ. ಅಂದರೆ 5 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಹಾಗೂ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯಗಳನ್ನಾಡಲಾಗುತ್ತಿದೆ. ಈ ಮೂಲಕ ಲೀಗ್ ಹಂತದಲ್ಲಿ ಪ್ರತಿ ತಂಡ ಒಟ್ಟು 14 ಪಂದ್ಯಗಳನ್ನು ಮಾತ್ರ ಆಡುತ್ತಿದೆ.
ಆದರೆ 2028ರಿಂದ ಪ್ರತಿತಂಡದ ವಿರುದ್ಧ ಎರಡೆರಡು ಪಂದ್ಯಗಳನ್ನಾಡಲಾಗುತ್ತದೆ. ಈ ಮೂಲಕ ಲೀಗ್ ಹಂತದಲ್ಲಿ 90 ಪಂದ್ಯಗಳನ್ನು ಆಡಲಾಗುತ್ತದೆ. ಅಲ್ಲದೆ 4 ಪ್ಲೇ ಆಫ್ ಪಂದ್ಯಗಳನ್ನು ಒಳಗೊಂಡಂತೆ ಒಟ್ಟು 94 ಮ್ಯಾಚ್ಗಳ ಟೂರ್ನಿ ಆಯೋಜಿಸಲು ಐಪಿಎಲ್ ಗವರ್ನಿಂಗ್ ಸಮಿತಿ ಪ್ಲ್ಯಾನ್ ರೂಪಿಸಿದೆ.
ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಐಪಿಎಲ್ ಸೀಸನ್-18ರಲ್ಲಿ 84 ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿತ್ತು. ಆದರೀಗ ಈ ನಿರ್ಧಾರದಿಂದ ಹಿಂದೆ ಸರಿದಿದ್ದರೂ, ಅತ್ತ ಪಂದ್ಯಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಐಪಿಎಲ್ ಪ್ರಸಾರಕ ಸಂಸ್ಥೆಗಳು ಮುಂದಿಟ್ಟಿವೆ. ಹೀಗಾಗಿ ಐಪಿಎಲ್ 2028ರಿಂದ 94 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ.