14ರ ಹರೆಯದ ಪೋರ ಮುರಿದ ದಾಖಲೆಗಳೆಷ್ಟು ಗೊತ್ತೆ?
ಜೈಪುರ: ನಿನ್ನೆ ರಾತ್ರಿ ನಡೆದ ಐಪಿಎಲ್‌ನ 47ನೇ ಪಂದ್ಯದಲ್ಲಿ ಇನ್ನೂ ಮೀಸೆ ಮೂಡದ 14 ವರ್ಷದ ಬಾಲಕ ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಶತಕದ ಆಟ ಇಡೀ ಕ್ರಿಕೆಟ್ ಜಗತ್ತನ್ನು ಮೋಡಿ ಮಾಡಿಬಿಟ್ಟಿದೆ. ಇದರೊಂದಿಗೆ ವೈಭವ್ ಎಂಬ ಬಾಲಕ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸಿದ್ದಾನೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದರು. ಈ ಸ್ಪೋಟಕ ಸೆಂಚುರಿ ನೆರವಿನಿನೊಂದಿಗೆ ರಾಜಸ್ಥಾನ್ ರಾಯಲ್ಸ್ 15.5 ಓವರ್ಗಳಲ್ಲಿ 212 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ವೃತ್ತಿ ಬದುಕು ಶುರು ಮಾಡಿದ ವೈಭವ್ ಸೂರ್ಯವಂಶಿ 3ನೇ ಪಂದ್ಯದಲ್ಲೇ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಕೇವಲ 17 ಎಸೆತಗಳಲ್ಲಿ 6 ಸಿಕ್ಸರ್, 3 ಬೌಂಡರಿ ಬಾರಿಸುವ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿದ್ದರು. ಮುಂದಿನ 18 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ ಶತಕ ಪೂರೈಸಿದ್ದಾರೆ. ಒಟ್ಟು ತಾನು ಎದುರಿಸಿದ 38 ಎಸೆತಗಳಲ್ಲಿ 101 ರನ್ (11 ಸಿಕ್ಸರ್, 7 ಬೌಂಡರಿ) ಸಿಡಿಸಿ ಔಟಾದರು.
ಇದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಹೊಸ ಇತಿಹಾಸ ನಿರ್ಮಿಸಿದ್ದು 14 ವರ್ಷದ ವೈಭವ್ ಸೂರ್ಯವಂಶಿ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ಈ ಶತಕದೊಂದಿಗೆ ಐಪಿಎಲ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಟಿ20 ಕ್ರಿಕೆಟ್ನಲ್ಲಿ ಸ್ಫೋಟಕ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ವಿಜಯ್ ಝೋಲ್ ಹೆಸರಿನಲ್ಲಿತ್ತು. 2013ರಲ್ಲಿ ನಡೆದ ಮುಂಬಯಿ ವಿರುದ್ಧದ ಟಿ20 ಪಂದ್ಯದಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿದಿದ್ದ 18 ವರ್ಷದ ಝೋಲ್ ಭರ್ಜರಿ ಸೆಂಚುರಿ ಸಿಡಿಸಿ ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ವೈಭವ್ ಯಶಸ್ವಿಯಾಗಿದ್ದಾರೆ.
14ನೇ ವಯಸ್ಸಿನಲ್ಲಿ ಸೆಂಚುರಿ ಸಿಡಿಸಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಹಾಗೂ 15 ವಯಸ್ಸಿನೊಳಗೆ 20 ಸೆಂಚುರಿ ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಕ್ರಿಸ್ ಗೇಲ್ (30 ಎಸೆತಗಳು) ಬಳಿಕ ಅತಿವೇಗದ ಶತಕ ಸಿಡಿಸಿದ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಯೂಸುಫ್ ಪಠಾಣ್ ಹೆಸರಿನಲ್ಲಿತ್ತು. 2010ರಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಪಠಾಣ್ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ದಾಖಲೆಯನ್ನು ಮುರಿದು ವೈಭವ್ ಸೂರ್ಯವಂಶಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ಚೊಚ್ಚಲ ಐಪಿಎಲ್ ಆಡುತ್ತಿರುವ 14ರ ಹರೆಯದ ವೈಭವ್ ಸೂರ್ಯವಂಶಿ ಸ್ಫೋಟಕ ಸೆಂಚುರಿ ಸಿಡಿಸಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ದಾಖಲೆಯೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ನೀಡಿದ 209 ರನ್ಗಳನ್ನು ಚೇಸ್ ಮಾಡಿ ಭರ್ಜರಿ ಗೆಲುವು ದಾಖಲಿಸಿದೆ.