ಎರಡು ದಿನದಲ್ಲಿ 5 ಸಾವಿರಕ್ಕೂ ಅಧಿಕ ಸೈನಿಕರ ರಾಜೀನಾಮೆ
ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಬಹುದು ಎಂಬ ಪರಿಸ್ಥಿತಿ ಇರುವಾಗಲೇ ಪಾಕಿಸ್ಥಾನ ವಿಚಿತ್ರ ಸಮಸ್ಯೆಯೊಂದರಲ್ಲಿ ಸಿಲುಕಿ ಒದ್ದಾಡುತ್ತಿದೆ. ಯುದ್ಧ ಭೀತಿಯಿಂದ ಪಾಕಿಸ್ಥಾನದ ಸೈನಿಕರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಶುರು ಮಾಡಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಬರೀ ಸೈನಿಕರು ಮಾತ್ರವಲ್ಲ, ಕ್ಯಾಪ್ಟನ್, ಕಮಾಂಡರ್‌ಗಳು ಸೇರಿ ಸೇನೆಯ ಉನ್ನತ ಅಧಿಕಾರಿಗಳೂ ಇದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಕೇವಲ ಎರಡು ದಿನಗಳಲ್ಲಿ ಸುಮಾರು 5 ಸಾವಿರ ಅಧಿಕಾರಿಗಳು ಮತ್ತು ಸೈನಿಕರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಭಾರತ ಯಾವುದೇ ಕ್ಷಣದಲ್ಲಿ ಪ್ರಬಲ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂಬ ಭಯದಿಂದ ಪಾಕಿಸ್ಥಾನಿ ಸೈನಿಕರ ಕುಟುಂಬಗಳು ಉದ್ಯೋಗಕ್ಕೆ ರಾಜೀನಾಮೆ ನೀಡಿ ವಾಪಸು ಬರುವಂತೆ ಒತ್ತಾಯಿಸುತ್ತಿವೆ ಎನ್ನಲಾಗಿದೆ. ಕೆಲವು ಸೈನಿಕರು ತಮ್ಮ ಸುರಕ್ಷತೆಯ ಬಗ್ಗೆ ಭಯಗೊಂಡು ಕರ್ತವ್ಯದಿಂದ ಹಿಂದೆ ಸರಿಯುತ್ತಿದ್ದಾರೆ. ಈಗಾಲೇ ಕೆಲವರು ರಾಜೀನಾಮೆ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ಸೈನಿಕರು ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ.
ರಾಜೀನಾಮೆ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಪಾಕ್ ಸೇನೆ ಸೇನಾ ನಿಯಮವನ್ನು ಉಲ್ಲಂಘಿಸಿದರೆ ಪಾಕಿಸ್ಥಾನ ಸೇನಾ ಕಾಯ್ದೆ ಅಡಿ ಕ್ರಮ ಜರುಗಿಸಲಾಗುವುದು ಎಂದು ವಾರ್ನಿಂಗ್ ನೀಡಿದ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ಥಿಕವಾಗಿ ಈಗಾಗಲೇ ತತ್ತರಿಸಿ ಹೋಗಿರುವ ಪಾಕಿಸ್ಥಾನದ ಮೇಲೆ ಒಂದು ಕಡೆಯಿಂದ ಬಲೂಚಿಸ್ಥಾನದ ಪ್ರತ್ಯೇಕತಾವಾದಿಗಳು ಮತ್ತೊಂದು ಕಡೆಯಿಂದ ತಾಲಿಬಾನ್ ದಾಳಿ ನಡೆಸುತ್ತಿದೆ.
ಬಲೂಚಿಸ್ತಾನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಬಂಡುಕೋರರು ಸೇನೆಯನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಈ ದಾಳಿಗಳಿಂದ ಭಾರಿ ಸಂಖ್ಯೆಯಲ್ಲಿ ಸೈನಿಕರು ಮೃತಪಟ್ಟಿರುವುದು ರಾಜೀನಾಮೆ ನೀಡಲು ಮತ್ತೊಂದು ಕಾರಣ ಎನ್ನಲಾಗಿದೆ.
ಮಾ.16ರಂದು ಪಾಕ್ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಬಲೂಚಿಸ್ಥಾನ್ ಲಿಬರೇಷನ್ ಆರ್ಮಿ ಪುಲ್ವಾಮಾ ಮಾದರಿಯ ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 90 ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಬಿಎಲ್‌ಎ ಹೇಳಿಕೊಂಡಿತ್ತು. ಪಾಕಿಸ್ಥಾನದಲ್ಲಿ ಭದ್ರತಾ ವ್ಯವಸ್ಥೆ ಬಹಳ ಕಳಪೆಯಾಗಿದೆ. ಇದಕ್ಕಾಗಿ ಯೋಧರು ತಮ್ಮ ಜೀವ ಕಳೆದುಕೊಳ್ಳುವ ಬದಲಿಗೆ ಸೇನೆ ತೊರೆದು ವಿದೇಶಗಳಲ್ಲಿ ಉದ್ಯೋಗಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.