ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಎ.26 ರಂದು ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಸುಗಮ ಸಂಚಾರಕ್ಕೆ ಮತ್ತು ಇತರ ವೈದ್ಯಕೀಯ ತುರ್ತು ಸೇವೆಗೆ ಅಡ್ಡಿ ಸಹಿತ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಆರೋಪದ ಮೇರೆಗೆ ಪ್ರತಿಭಟನಾಕಾರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.25ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾಜ್ಯೋತಿ ಕೆ ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದಕ್ಕೆ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿಲ್ಲ ಎಂಬ ಕಾರಣಕ್ಕೆ ಎ.26 ರಂದು ಬೆಳಿಗ್ಗೆ ಮಹಿಳಾ ಪೊಲೀಸ್ ಠಾಣೆಯ ಮುಂಭಾಗ ಕೆಲವು ಸಂಘಟನೆಯ ಸದಸ್ಯರುಗಳು ಅನಿರೀಕ್ಷಿತವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗದಿಂದ ಬೊಳುವಾರು- ದರ್ಬೆ ಮುಖ್ಯ ರಸ್ತೆಗೆ ಏಕಾಏಕಿ ಬಂದು ರಸ್ತೆಯ ಮದ್ಯದಲ್ಲಿ ಕುಳಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಇತರ ವೈದ್ಯಕೀಯ ತುರ್ತು ಸೇವೆಗೆ ಅಡ್ಡಿಪಡಿಸಿದ್ದಲ್ಲದೇ “ರಸ್ತೆಯಲ್ಲಿ ಕುಳಿತು ಪೊಲೀಸರಿಗೆ ದಿಕ್ಕಾರ ಘೋಷಣೆ ಕೂಗಿರುತ್ತಾರೆ” ಈ ಸಂದರ್ಭ ಇಲಾಖಾ ಅಧಿಕಾರಿಗಳು ರಸ್ತೆ ತಡೆಯಬೇಡಿ. ಆರೋಪಿಗಳನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೂ ಕೂಡ ಪೊಲೀಸರ ಮಾತನ್ನು ಕೇಳದ ಪ್ರತಿಭಟನಕಾರರು ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ ಅಂದಾಜು ಒಂದು ಗಂಟೆಗಳ ಕಾಲ ರಸ್ತೆಯನ್ನು ತಡೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದಲ್ಲದೆ ಸಮವಸ್ತ್ರದಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪಿರ್ಯಾದಿದಾರರನ್ನು ಹಾಗೂ ಇತರೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಪ್ರತಿಭಟನಾಕಾರರಲ್ಲಿ ಕೆಲವರು ತಳ್ಳಿಕೊಂಡು ಸಮವಸ್ತ್ರಕ್ಕೆ ಕೈಹಾಕಿ ಸೂಕ್ತವಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವ ಆರೋಪದ ಮೇಲೆ ಪ್ರತಿಭಟನಾಕಾರರ ವಿರುದ್ಧ ಕಲಂ :೧೮೯ (೨), ೧೨೬(೨), ೨೭೦,೧೩೨,೨೮೫, ಜೊತೆಗೆ ೧೯೦ oS ೨೦೨೩ ಪ್ರಕರಣ ದಾಖಲಾಗಿದೆ.