ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಂದ ಪದೇ ಪದೇ ಆಗುತ್ತಿರುವ ತೊಂದರೆಯ ನಿಟ್ಟಿನಲ್ಲಿ ಆಸ್ಪತ್ರೆಯ ಪ್ರಮುಖ ಬಾಗಿಲುಗಳನ್ನು ಮುಚ್ಚಲಾಗುವುದು. ಅಲ್ಲದೆ ನಾಲ್ವರು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಈ ಕುರಿತು ಇಂದಿನಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಏ.25 ಶುಕ್ರವಾರ ನಡೆದ ಘಟನೆಯ ಕುರಿತು ಸ್ಪಷ್ಟನೆ ನೀಡಿ, ಮುಖ್ಯವಾಗಿ ಹೆರಿಗೆ ವಾರ್ಡಿನಲ್ಲಿ ಗಂಡಸರಿಗೆ ಎಂಟ್ರಿ ಇಲ್ಲ. ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಅವರು ಘಟನೆಗೆ ಕಾರಣರಾದವರಿಗೆ ಹೊರಗೆ ಹೋಗುವಂತೆ ಒಳ್ಳೆಯ ರೀತಿಯಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಕ್ಷಣ ನಾವು ಆಸ್ಪತ್ರೆಯ ಸುರಕ್ಷಾ ಸಮಿತಿ, ಐಎಂಎ, ಡಾಕ್ಟರ್ಸ್ ಫೋರಂ, ಇಂಡಿಯನ್ ಡೆಂಟಲ್ ಎಸೋಸಿಯೇಶನ್ ಸಹಿತ ಎಂಎಲ್ಎ ಪಿಎ ಅವರಿಗೆ ತಕ್ಷಣ ಫೋನ್ ಕರೆ ಮಾಡಿ ತಿಳಿಸಿದ್ದೆ. ಆದರೆ ಎಂಎಲ್ ಎ ಅವರ ಗಮನಕ್ಕೆ ಬಂದಿಲ್ಲ. ಘಟನೆ ನಡೆದ ಸಂಜೆ ನಾವು ಆರೋಪಿಗಳನ್ನು ಬಂಧಿಸಬೇಕು ಎಂದು ಮಹಿಳಾ ಠಾಣೆಗೆ ದೂರು ನೀಡಿದ್ದೇವೆ. ಆರೋಪಿಗಳನ್ನು ಬಂಧಿಸದೇ ಇದ್ದ ಕಾರಣ ಮರುದಿನ ನಾವು ಕಾಲ್ನಡಿಗೆಯಲ್ಲಿ ಮಹಿಳಾ ಠಾಣೆಗೆ ತೆರಳಿದ್ದೇವೆ. ಜಾಥಾದಲ್ಲಿ ನಮ್ಮ ಆಸ್ಪತ್ರೆ ವೈದ್ಯರುಗಳು ಮತ್ತು ಸಿಬ್ಬಂದಿಗಳು ಮಾತ್ರ ಇದ್ದೆವು. ಆದರೆ ಅಲ್ಲಿ ರಾಜಕೀಯ ಪಕ್ಷದವರು, ಇನ್ನಿತರ ಮುಖಂಡರು ಸೇರಿದ್ದರು. ಈ ರೀತಿ ಸೇರುತ್ತಾರೆ ಎಂದು ನಮಗೆ ಗೊತ್ತಿಲ್ಲ. ನಮ್ಮ ಸಂಘ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ನಮ್ಮನ್ನು ರಾಜಕೀಯ ಬಣ್ಣ ಹಚ್ಚದೆ ನೋಡಿ ಎಂದು ಅವರು ವಿನಂತಿಸಿದರು.
ಈ ರೀತಿಯ ಘಟನೆಯಿಂದ ವೈದ್ಯರಿಗೆ ನೋವಾಗುವುದು ಸಹಜ. ಇದೀಗ ವಿಶ್ರಾಂತಿಗಾಗಿ ತೆರಳಿದ ಡಾ.ಆಶಾ ಪುತ್ತೂರಾಯ ಅವರೇ ವೈದ್ಯಾಧಿಕಾರಿಯಾಗಿ ಇಲ್ಲಿ ಉಳಿಯಬೇಕು. ಆದರೆ ಆರೋಪಿಯ ಬಂಧನ ಇನ್ನೂ ಆಗಿಲ್ಲ. ನಾವೂ ಇನ್ನು ಕಪ್ಪುಪಟ್ಟಿ ಧರಿಸಿ ಕರ್ತವ್ಯ ಮಾಡುತ್ತಿದ್ದೇವೆ. ಆರೋಪಿಗಳನ್ನು ಬಂಧನ ಮಾಡುತ್ತೇವೆ ಎಂದು ಎಸ್ ಪಿಯವರು ತಿಳಿಸಿದ್ದಾರೆ. ನಾನು ಕಾನೂನು ಪ್ರಕಾರ ನಡೆದುಕೊಳ್ಳುತ್ತೇವೆ. ಈ ರೀತಿಯ ಘಟನೆ ನಡೆದರೆ ನಮಗೆ ಕೆಲಸ ಮಾಡಲು ಸ್ಪೂರ್ತಿಯಾಗುತ್ತಿಲ್ಲ. ಸರಕಾರಿ ವೈದ್ಯರ ಮೇಲೆ ಈ ರೀತಿ ಆದರೆ ಯಾರು ನಿಷ್ಠೆಯಿಂದ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.
ಡಾ.ಅರ್ಚನಾ ಮಾತನಾಡಿ, ರಾತ್ರಿ ವೇಳೆ ನಾವು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುತ್ತೇವೆ. ಇಂತಹಾ ಸಮಯದಲ್ಲಿ ಹೆರಿಗೆ ವಾರ್ಡಿಗೆ ಯಾರನ್ನೂ ಬಿಡುವುದಿಲ್ಲ. ಕಾರಣ ಕೆಲವರು ಬಂದು ಸೋಂಕು ಹರಡಿ ಹೋಗುತ್ತಾರೆ. ಅದು ಇನ್ನೊಬ್ಬರಿಗೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಈ ವಿಚಾರದಲ್ಲಿ ಜಾತಿ-ಧರ್ಮ, ಬಡವರು, ಶ್ರೀಮಂತರು, ರಾಜಕೀಯ ಬರುವುದಿಲ್ಲ. ಈ ನಿಟ್ಟಿನಲ್ಲಿ ನಮಗೆ ಭದ್ರತೆ ಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಅಜೇಯ್, ಡಾ.ಯದುಕುಮಾರ್, ಡಾ.ನಿಖಿಲ್ ಉಪಸ್ಥಿತರಿದ್ದರು.