ಮನ್ ಕಿ ಬಾತ್‌ನಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮದ ಭರವಸೆ
ನವದೆಹಲಿ: ಪಹಲ್ಗಾಮ್ ದಾಳಿಯಿಂದ ಸಂತ್ರಸ್ತರಾಗಿರುವವರು ದುಃಖಿಸುತ್ತಿರುವ ದೃಶ್ಯಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ 121ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಪಹಲ್ಗಾಮ್ ದಾಳಿಯಿಂದ ನನಗೆ ತುಂಬಾ ನೋವಾಗಿದೆ. ಇದು ಭಯೋತ್ಪಾದನೆಯ ಬೆಂಬಲಿಗರ ಹತಾಶೆ, ಹೇಡಿತನವನ್ನು ತೋರಿಸುತ್ತದೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಲಿದೆ. ಅಪರಾಧ ಎಸಗಿದವರಿಗೆ, ಬೆಂಬಲಿಗರಿಗೆ, ಸೂತ್ರಧಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದರು.
ರಾಷ್ಟ್ರದ ಶತ್ರುಗಳು ಕಾಶ್ಮೀರದ ಗಮನಾರ್ಹ ಪ್ರಗತಿಯನ್ನು ಹಳಿತಪ್ಪಿಸಲು ನಡೆಸಿದ ಹತಾಶ ಪ್ರಯತ್ನವಿದು. ಕಾಶ್ಮೀರ ಇತ್ತೀಚಿನ ವರ್ಷಗಳಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿತ್ತು. ಪ್ರವಾಸೋದ್ಯಮದಲ್ಲಿ ಯುವಕರಿಗೆ ಹೊಸ ಅವಕಾಶ ಸಿಕ್ಕಿತ್ತು. ಕಾಶ್ಮೀರದಲ್ಲಿ ಶಾಂತಿ ಮರಳುತ್ತಿರುವ ಸಮಯದಲ್ಲಿ ಶಾಲಾ ಕಾಲೇಜುಗಳಲ್ಲಿ ಚೈತನ್ಯವಿತ್ತು. ಈ ಅಭಿವೃದ್ಧಿ ಜಮ್ಮು-ಕಾಶ್ಮೀರದ ಪ್ರಗತಿಯನ್ನು ಶತ್ರುಗಳಿಗೆ ಸಹಿಸಲು ಆಗುತ್ತಿಲ್ಲ. ಭಯೋತ್ಪಾದಕರು ಮತ್ತೊಮ್ಮೆ ಕಾಶ್ಮೀರವನ್ನು ನಾಶಮಾಡಲು ಬಯಸುತ್ತಿದ್ದಾರೆ ಎಂದರು.
ಜಾಗತಿಕ ನಾಯಕರು ಈ ಕೃತ್ಯವನ್ನು ಖಂಡಿಸಿ ನನಗೆ ಕರೆ ಮಾಡಿದ್ದಾರೆ, ಪತ್ರಗಳನ್ನು ಬರೆದಿದ್ದಾರೆ, ಸಂದೇಶಗಳನ್ನು ಕಳುಹಿಸಿದ್ದಾರೆ. ಈ ಘೋರ ಭಯೋತ್ಪಾದಕ ದಾಳಿಯನ್ನು ಎಲ್ಲರೂ ಬಲವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟಕ್ಕೆ ಇಡೀ ಜಗತ್ತು ನಮ್ಮ ಹಿಂದೆ ನಿಂತಿದೆ ಎಂದು ತಿಳಿಸಿದರು.