ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮೇಲೆ ಅನುಚಿತ ವರ್ತನೆ ಹಾಗೂ ಹಲ್ಲೆಗೆ ಯತ್ನಿಸಿದ ಯುವಕನನ್ನು ಇಂದು ಸಂಜೆ 6 ಗಂಟೆ ಒಳಗೆ ಬಂಧಿಸದಿದ್ದಲ್ಲಿ ತಾಲೂಕಿನ ಎಲ್ಲಾ ಆಸ್ಪತ್ರೆಗಳು ಬಂದ್ ಆಗಲಿದೆ ಎಂಬ ಎಚ್ಚರಿಕೆಯನ್ನು ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖ ಎಚ್ಚರಿಕೆ ನೀಡಿದೆ.
ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮೇಲೆ ವ್ಯಕ್ತಿಯೋರ್ವ ಅನುಚಿತ ವರ್ತನೆ, ಹಲ್ಲೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಈ ನಿಟ್ಟಿನಲ್ಲಿ ವೈದ್ಯರು ಹಾಗೂ ಬಿಜೆಪಿ ಮುಖಂಡರು ಶನಿವಾರ ಬೆಳಿಗ್ಗೆ ಪುತ್ತೂರು ಮಹಿಳಾ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಈ ಎಚ್ಚರಿಕೆಯನ್ನು ನೀಡಿದರು.

ಪ್ರತಿಭಟನೆ ಸಂದರ್ಭದಲ್ಲಿ ಮಹಿಳಾ ಠಾಣೆ ಎದುರು ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಘಟನೆ : ಶುಕ್ರವಾರ ರಾತ್ರಿ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆಗೆ ಯತ್ನಿಸಿದ ಝೊಹರಾ ಹಾಗೂ ಆಕೆಯ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸದೆ ಬಿಟ್ಟಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖೆಯ ಪದಾಧಿಕಾರಿಗಳು ವೈದ್ಯರು ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರ ನೇತೃತ್ವದಲ್ಲಿ ರಾತ್ರಿ ಮಹಿಳಾ ಠಾಣೆ ಮುಂದೆ ಜಮಾಯಿಸಿದ್ದರು. ಆರೋಪಿಗಳನ್ನು ಬಂಧಿಸದೆ ಬಿಟ್ಟಿದ್ದರಿಂದ ಪೊಲೀಸರು ಹಾಗೂ ಅಲ್ಲಿ ನೆರೆದವರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರಿಂದ ಪೂರಕ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಸಂಘಟನೆಯವರು ಪೊಲೀಸರ ವಿರುದ್ಧ ದಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಠಾಣಾ ಇನ್‍ಸ್ಪೆಕ್ಟರ್ ಜೋನ್ಸನ್ ಡಿ’ಸೋಜಾ ವೈದ್ಯಾಧಿಕಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು. ನಾಳೆ ಬೆಳಿಗ್ಗೆ 8 ಗಂಟೆಯ ಒಳಗೆ ಬಂಧಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿ ತೆರಳಿದ್ದರು.

ಆರೋಪಿಯನ್ನು ಪೊಲೀಸರು ಬಂಧಿಸದೇ ಇದ್ದ ಕಾರಣ ಶನಿವಾರ ಬೆಳಿಗ್ಗೆ ವೈದ್ಯರ ಸಂಘಟನೆ ಹಾಗೂ ಬಿಜೆಪಿ ಮುಖಂಡರುಗಳು ಮಹಿಳಾ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ, ಇಂದು ಸಂಜೆ 6 ಗಂಟೆ ಒಳಗೆ ಬಂಧಿಸದಿದ್ದಲ್ಲಿ ತಾಲೂಕಿನ ಎಲ್ಲಾ ಆಸ್ಪತ್ರೆಗಳನ್ನು ಬಂದ್ ಮಾಡಲಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡಿದರು.
ಭಾರತೀಯ ವೈದ್ಯಕೀಯ ಎಸೋಸಿಯೇಶನ್ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ಗಣೇಶ್ ಪ್ರಸಾದ್ ಮುದ್ರಜೆ ಈ ಸಂದರ್ಭದಲ್ಲಿ ಮಾತನಾಡಿ, ನಿನ್ನೆ ನಡೆದ ಘಟನೆಯಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಸಂಘ ಹಾಗೂ ವೈದ್ಯಕೀಯ ಮಿತ್ರರು ಸೇರಿಕೊಂಡು ನಿನ್ನೆ ನಡೆದ ಘಟನೆಯನ್ನು ಖಂಡಿಸುತ್ತೇವೆ. ಈಗಾಗಲೇ ಕರ್ನಾಟಕ ಸರಕಾರ ವಿಶೇಷ ಕಾನೂನನ್ನು ತಂದಿದೆ. ವೈದ್ಯರಿಗೆ ಕರ್ತವ್ಯಕ್ಕೆ ಅಡ್ಡಿಯಾದರೆ ಅವರಿಗೆ ರಕ್ಷಣೆ ನೀಡುವ ಕೆಲಸ ಸರಕಾರ ಹಾಗೂ ಪೊಲೀಸ್ ಇಲಾಖೆಗಿದೆ. ಹೀಗಿದ್ದೂ ಪುತ್ತೂರಿನಲ್ಲಿ ವೈದ್ಯರನ್ನು ಅಣಕಿಸುವ, ಘನತೆಗೆ ಕುಂದು ತರುವ ಕೆಲಸ ಪದೇ ಪದೇ ಆಗುತ್ತಿದೆ. ಈ ಕುರಿತು ಪ್ರತಿಭಟನೆಯನ್ನೂ ಮಾಡಿದ್ದೇವೆ. ನಮ್ಮ ಸಂಘ ಪಕ್ಷವನ್ನು ನೋಡಿ ಮಾಡುತ್ತಿಲ್ಲ. ನಮಗೆ ನಮ್ಮದೇ ಆದ ನೋವು, ಗೌರವಗಳಿವೆ. ನಮ್ಮನ್ನು ಗೌರವದಿಂದ ಕಾಣುವಂತಾಗಬೇಕು. ಇದೀಗ ಶುಕ್ರವಾರ ನಡೆದ ಘಟನೆಯಿಂದ ತಕ್ಷಣ ನಾವು ಎಚ್ಚೆತ್ತುಕೊಂಡಿದ್ದೇವೆ. ಇನ್ನು ಮುಂದೆ ಹೀಗೆ ನಡೆಯದಂತೆ ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ತಿಳಿಸಿದ್ದೇವೆ. ಈ ಘಟನೆಯಲ್ಲಿ ಕಾರಣರಾದ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿ, ಸರಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ ಕುರಿತು ಯಾರೂ ಕರೆ ಮಾಡಿಲ್ಲ. ಮಾಧ್ಯಮದ ಮೂಲಕ ನನಗೆ ತಿಳಿಯಿತು. ವೈದ್ಯರು ಕೆಲಸ ಮಾಡುವಾಗ ಇಬ್ಬರನ್ನು ಹೊರಗಡೆ ಹೋಗಲು ಹೇಳಿದ್ದಾರೆ. ಆಗ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಕಠಿಣ ಪದಗಳಿಂದ ವೈದ್ಯಾಧಿಕಾರಿಗೆ ಬೈದಿದ್ದಾರೆ ಎಂದು ತಿಳಿದುಬಂದಿದೆ. ಸಾವರ್ಜನಿಕರು ಸರಕಾರಿ ಆಸ್ಪತ್ರೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕಾನೂನು ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆ ಮಾಡುತ್ತದೆ. ಈ ಕುರಿತು ಎಸ್ ಪಿ ಯವರ ಜತೆ ಮಾತನಾಡಿದ್ದೇವೆ. ಯಾವುದೇ ವೈದ್ಯರಿಗೆ ನಾವು ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಇಂದು ಸಂಜೆಯೊಳಗೆ ಘಟನೆಗೆ ಕಾರಣರಾದವರನ್ನು ಠಾಣೆಗೆ ಕರೆದುಕೊಂಡು ಬರಬೇಕು ಎಂದು ಠಾಣೆಗೆ ಸೂಚನೆ ನೀಡಿದರು. ಹಿಂದೆ ಕೂಡಾ ಸರಕಾರಿ ಆಸ್ಪತ್ರೆಯಲ್ಲಿ ಬಂದು ವೈದ್ಯರುಗಳಿಗೆ ಅವಾಚ್ಯ ಶಬ್ದಗಳಿಂದ ಬೈದ ಪ್ರಕರಣಗಳು ನಡೆದಿವೆ. ಈ ಕುರಿತು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.