ಪುತ್ತೂರು: ಕೆಂಪು ಕೇಪುಲಾಜೆ ಬೆಮ್ಮೆರೆ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮೇ1 ರಂದು ನಿಡ್ಪಳ್ಳಿಯ ಬ್ರಹ್ಮರ ಗುಂಡದಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 300 ವರ್ಷಗಳ ಇತಿಹಾಸವಿರುವ ಬೆಮ್ಮೆರಗುಂಡ ಮೂಲಸ್ಥಾನ ಇದುವರೆಗೆ ತಿಳಿದು ಬಂದಿಲ್ಲವಿತ್ತು. ಈ ನಿಟ್ಟಿನಲ್ಲಿ ಆಲಂಕಾರು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಅಧ್ಯಯನ ನಿರತವಾಗಿತ್ತು. ಇದೀಗ ಮೂಲಸ್ಥಾನ ಕಂಡು ಬಂದಿದ್ದು, ಮೂಲ ನಾಗನ ಗುಂಡ ಸಹಿತ ಮೊಗೇರ್ಕಳ ದೈವಸ್ಥಾನ ಸುಮಾರು ಒಂದೂವರೆಯಿಂದ ಎ ರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಜತೆಗೆ ಮೂಲಭೂತ ಸೌಕರ್ಯಗಳಾದ ನೀರಿನ ವ್ಯವಸ್ಥೆ ಮುಂತಾದವುಗಳ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ದೈವಸ್ಥಾನ ಮೊಗೇರ್ಕಳ ಸಮುದಾಯಕ್ಕೆ ಸೇರಿದ್ದಾಗಿದ್ದು, ಹಿಂದೂ ಸಮಾಜವನ್ನು ಸೇರಿಸಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 2 ರಿಂದ 3 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಂದು ಹೇಳಿದರು.
ಬೆಳಿಗ್ಗೆ 9.30 ಕ್ಕೆ ನಡೆಯುವ ಶಿಲಾನ್ಯಾಸ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ರಘು ವಹಿಸಲಿದ್ದಾರೆ. ಕಾಂಞಾಗಾಡ್ ದೈವಜ್ಞ ಧನೇಶ್ ವೆಳ್ಳಿಕೋತ್, ದೊಡ್ಡಡ್ಕ ದೈವಜ್ಞ ಮನಮೋಹನ ಪಂಡಿತ್ ದಿವ್ಯ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ. ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸಹಿತ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ಕಾರ್ಯಾಧ್ಯಕ್ಷ ಕರುಣಾಕರ ಪಲ್ಲತ್ತಡ್ಕ ಬಾಲಕೃಷ್ಣ ಕೇಪುಳು, ಕೋಶಾಧಿಕಾರಿ ಶೇಖರ ಮಾಡಾವು, ಸದಸ್ಯರಾದ ಪ್ರಕಾಶ್ ಪಿ.ಎಸ್. ಪಾತೆಟ್ಟಿ, ಟ್ರಸ್ಟ್ ಸಂಚಾಲಕ ವಿಜಯ ವಿಕ್ರಮ ಉಪಸ್ಥಿತರಿದ್ದರು.