ಚಿನ್ನ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವ ಅನುಮಾನ
ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ರಾತ್ರಿಯಿಡೀ ಪರಿಶೀಲನೆ ನಡೆಸಿದೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ವಿನಯ್ ಕುಲಕರ್ಣಿ ನಿವಾಸದ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಚಿನ್ನ ಹಾಗೂ ಕೆಲ ವ್ಯವಹಾರದಲ್ಲಿ ಐಶ್ವರ್ಯಾ ಗೌಡ ಹಾಗೂ ಶಿಲ್ಪಾ ಗೌಡ ಎಂಬುವವರು ವಂಚನೆ ಮಾಡಿದ್ದರು ಎಂಬ ಆರೋಪ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ತನಿಖೆ ವೇಳೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿರುವುದು ಪತ್ತೆಯಾಗಿತ್ತು.
ಚಿನ್ನ ವಂಚನೆ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ಬೇನಾಮಿ ವ್ಯವಹಾರ ನಡೆಸಿದ್ದಾರೆ ಎಂದು ಪೊಲೀಸರು ಇಡಿಗೆ ಮಾಹಿತಿ ನೀಡಿದ್ದರು. ಪೊಲೀಸರ ಮಾಹಿತಿ ಆಧರಿಸಿ ಇಸಿಐಆರ್ ದಾಖಲಿಸಿಕೊಂಡಿದ್ದ ಇ.ಡಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹಲವರ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.