ಪುತ್ತೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾಧಕರ ನಡೆಸಿದ ನರಮೇಧದಿಂದ ಮೃತಪಟ್ಟ ಕುಟುಂಬಗಳಿಂದ ಅನಾಥರಾದ ಮಕ್ಕಳಿಗೆ ಎಲ್ ಕೆಜಿಯಿಂದ ಪದವಿ ತನಕ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ಒದಗಿಸಲಾಗುವುದು ಎಂದು ಅಂಬಿಕಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದಿರುವ ದಾಳಿಯಿಂದ ಹಿಂದೂ ಸಮಾಜ ತಲೆ ತಗ್ಗಿಸುವಂತಾಗಿದೆ. ಹಿಂದೂ ಧರ್ಮದಲ್ಲಿ ಹುಟ್ಟಿರುವುದೇ ಪಾಪ ಎಂಬಂತಾಗಿದೆ. ಹಿಂದೂವಿಗೆ ಅನ್ಯಾಯ ನಡೆದಾಗ ಅದು ದೇಹದಲ್ಲಿ ಪಸರಿಸುವಂತೆ ಸಮಾಜದಲ್ಲಿ ಪಸರಿಸಬೇಕು. ಭಯೋತ್ಪಾಧಕರ ದಾಳಿಗೆ ತುತ್ತಾ ಕುಟುಂಬಗಳ ಜೊತೆಗೆ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಕಾಶ್ಮೀರ ದಾಳಿಯಲ್ಲಿನ ಸಂತ್ರಸ್ತ ಕುಟುಂಬಗಳ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವುದಕ್ಕೆ ನಿರ್ಧರಿಸಲಾಗಿದೆ.
ಎಲ್‌ಕೆಜಿ ತರಗತಿಯಿಂದ ತೊಡಗಿ ಪದವಿ ಹಂತದ ತನಕ ಯಾವುದೇ ತರಗತಿಯಲ್ಲಿ ಓದಲು ಬಯಸುವ ದಾಳಿ ಸಂತ್ರಸ್ತರ ಮಕ್ಕಳಿಗೆ ಊಟೋಪಚಾರ, ವಸತಿ ಮತ್ತು ಶುಲ್ಕರಹಿತವಾಗಿ ಉಚಿತ ಶಿಕ್ಷಣ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.
ಈ ಹಿಂದೆ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯದ ಘೋರತೆಯನ್ನು ಮನಗಂಡು ಕಾಶ್ಮೀರಿ ಸಂತ್ರಸ್ತ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು. ಅದರ ಅನ್ವಯ ಕಾಶ್ಮೀರದಿಂದ ಇಬ್ಬರು ವಿದ್ಯಾರ್ಥಿಗಳು ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯಕ್ಕೆ ಆಗಮಿಸಿ ಪಿಯು ದಾಖಲಾತಿ ಪಡೆದು ಶಿಕ್ಷಣ ಮುಂದುವರಿಸುತ್ತಾರೆ. ಅಲ್ಲದೆ ಸೈನಿಕರ ಮಕ್ಕಳಿಗೆ ಹಲವು ವರ್ಷಗಳಿಂದ ಸಂಸ್ಥೆಯು ರಿಯಾಯಿತಿ ಶುಲ್ಕದೊಂದಿಗೆ ಶಿಕ್ಷಣ ಒದಗಿಸುತ್ತಿದೆ. ಜೊತೆಗೆ ಸೈನಿಕರು ನಿವೃತ್ತಿ ಹೊಂದಿದಾಗ ಸನ್ಮಾನಿಸುವ ಕೆಲಸ ಮಾಡಲಾಗಿದೆ. ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿ ಸ್ಮಾರಕ ರಚಿಸಿದ ಕೀರ್ತಿಯೂ ಅಂಬಿಕಾ ಶಿಕ್ಷಣ ಸಂಸ್ಥೆಗಿದೆ ಎಂದು ಮಾಹಿತಿ ನೀಡಿದರು.
ಕಾಶ್ಮೀರದಲ್ಲಿ ನಡೆದ ಭಯೋತ್ಪಾಧಕ ದಾಳಿಯ ವಿರುದ್ಧ ಸಂಸ್ಥೆಯ ವಿದ್ಯಾರ್ಥಿ ಸಂಘಗಳ ವತಿಯಿಂದ ಪ್ರತಿಭಟನೆ ನಡೆಸಿ ಭಯೋತ್ಪಾಧನೆಯನ್ನು ಬೇರು ಸಹಿತ ಕಿತ್ತು ಹಾಕುವಂತೆ ಆಗ್ರಹಿಸಿ ಪುತ್ತೂರಿನ ಉಪವಿಭಾಗಾಧಿಕಾರಿಗಳ ಮೂಲಕ ದೇಶದ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಇದೀಗ ಕಾಶ್ಮೀರ ದಾಳಿಯಿಂದ ತಮ್ಮ ತಂದೆಯನ್ನು ಕಳೆದುಕೊಂಡಿರುವ ಮಕ್ಕಳು ಶಿಕ್ಷಣಕ್ಕಾಗಿ ಕಿಂಚಿತ್ತೂ ಕಷ್ಟ ಪಡುವಂತೆ ಆಗಬಾರದು ಎಂಬ ಉದ್ದೇಶದಿಂದ ಹಾಗೂ ಸಂತ್ರಸ್ತರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಹಾಸ್ಟೆಲ್ ಸಹಿತ ಸಂಪೂರ್ಣ ಉಚಿತ ಶಿಕ್ಷಣ ಫೋಷಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಸದಸ್ಯರಾದ ಡಾ. ಹೆಚ್. ಮಾಧವ ಭಟ್, ಬಾಲಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು.