ಜೀನಿ ಸಂಸ್ಥೆಯ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ ಘಟನೆ ನಡೆದಿದೆ.
ಜೀನಿ ಕಂಪೆನಿಯ ಮಾಲೀಕರಾದ ದಿಲೀಪ್ ಕುಮಾರ್ ವಿರುದ್ಧ ಅವರದ್ದೇ ಕಂಪೆನಿಯ ಕೆಲಸ ಮಾಡುತ್ತಿದ್ದ ಮೇಘನಾ ಎಂಬುವವರು ದೂರು ನೀಡಿದ್ದು, ದೂರಿನಲ್ಲಿ ತಿಳಿಸಿದಂತೆ, ಕಳೆದ ಹತ್ತು ತಿಂಗಳ ಹಿಂದೆ ನಾನು ಕೆಲಸಕ್ಕೆ ಸೇರಿದ್ದೆ, ಕಳೆದ 15 ದಿನಗಳಿಂದ ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿ, ನನ್ನನ್ನು ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ತುಮಕೂರು ಜಿಲ್ಲೆ, ಶಿರಾ ತಾಲೂಕಿನ, ಯರಗುಂಟೆ ಬಳಿ ಇರುವ ಜೀನಿ ಕಂಪನಿಯಲ್ಲಿ ಕೆಲಸಕ್ಕೆ ಬರುವ ಅನೇಕ ಯುವತಿಯರ ಮೇಲೂ ಈ ರೀತಿ ಕೃತ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೆ ಬೇಡಿಕೊಂಡರು ಬಿಡದೆ ಅತ್ಯಾಚಾರಕ್ಕೆ ಯತ್ನಿಸುತ್ತಾರೆ. ಒಂದು ವೇಳೆ ಸಹಕರಿಸದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ನೂ ಜೀನಿ ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.