28.58 ಕೋ. ರೂ. ವೆಚ್ಚದ ದುರಸ್ತಿ ಕಾಮಗಾರಿಗೆ ಇಂದು ಸಂಸದರಿಂದ ಚಾಲನೆ
ಮಂಗಳೂರು : ನವಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ಬಿ.ಸಿ.ರೋಡ್‌ವರೆಗಿನ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಯ ದುರಸ್ತಿಗೆ ಕೊನೆಗೂ ಕಾಲಕೂಡಿ ಬಂದಿದೆ. ಸುಮಾರು 28 ಕೋ. ರೂ. ವೆಚ್ಚದಲ್ಲಿ ಹೆದ್ದಾರಿಯ ಮರುಡಾಂಬರೀಕರಣ ಮತ್ತು ದುರಸ್ತಿ ನಡೆಯಲಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ ಇಂದು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಸುರತ್ಕಲ್‌ನ ಗೋವಿಂದದಾಸ್ ಕಾಲೇಜಿನ ಸಮೀಪದ ಹೆದ್ದಾರಿ ಬಳಿ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬಹುಬೇಡಿಕೆ ಹಾಗೂ ನಿರೀಕ್ಷೆಯ ಕಾಮಗಾರಿಗೆ ಚಾಲನೆ ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಜತೆಗೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ. ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್ ಹಾಗೂ ನವ ಮಂಗಳೂರು ಬಂದರು ರಸ್ತೆ ಕಂಪೆನಿ ಲಿಮಿಟೆಡ್(ಎನ್‌ಎಂಪಿಆರ್‌ಸಿಎಲ್)ನ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅದರಲ್ಲೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ಸುರತ್ಕಲ್-ನಂತೂರು, ಬಿಸಿ.ರೋಡ್-ಪಡೀಲ್ ಹಾಗೂ ನಂತೂರು ಜಂಕ್ಷನ್‌ನಿಂದ ಪಡೀಲ್‌ವರೆಗಿನ ಬೈಪಾಸ್ ರಸ್ತೆ ಸೇರಿದಂತೆ ಒಟ್ಟು 37.42 ಕಿಮೀ. ದೂರದ ಹೆದ್ದಾರಿಗಳ ದುರಸ್ತಿ, ಮರುಡಾಂಬರೀಕರಣ ಹಾಗೂ ನಿರ್ವಹಣೆ ಕೆಲಸಗಳಿಗಾಗಿ ನವಮಂಗಳೂರು ಬಂದರು ರಸ್ತೆ ಕಂಪೆನಿ ಲಿಮಿಟೆಡ್(ಎನ್‌ಎಂಪಿಆರ್‌ಸಿಎಲ್) ಒಟ್ಟು 28.58 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆಸಲಿದೆ. ಮುಗ್ರೋಡಿ ಕನ್ಸ್‌ಸ್ಟ್ರಕ್ಷನ್ ಈ ಎಲ್ಲ ಹೆದ್ದಾರಿ ಕಾಮಗಾರಿಗಳ ಗುತ್ತಿಗೆಯನ್ನು ಪಡೆದುಕೊಂಡಿದೆ.
ಒಟ್ಟು 28.58 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್‌ನಿಂದ ಎಪಿಎಂಸಿ, ಕೂಳೂರಿನಿಂದ ಎಜೆ ಆಸ್ಪತ್ರೆ ಹಾಗೂ ನಂತೂರಿನಿಂದ ಪಡೀಲ್‌ವರೆಗಿನ 11.084 ಕಿಮೀ. ಉದ್ದದ ರಸ್ತೆಯ ಡಾಂಬರೀಕರಣ ನಡೆಯಲಿದೆ. ಅಲ್ಲದೆ, ಹೆದ್ದಾರಿ ಬದಿ ಬೆಳೆದಿರುವ ಗಿಡಗಂಟಿ ತೆಗೆಯುವ ಹಾಗೂ ಸ್ವಚ್ಛತಾ ಕಾರ್ಯ ನಡೆಯಲಿದೆ. ಜತೆಗೆ ರಸ್ತೆ ಬದಿ ಜಾಗದ ನಿರ್ವಹಣೆ, ಇತರ ನಿರ್ವಹಣಾ ಕಾಮಗಾರಿ ಹಾಗೂ ಹೆದ್ದಾರಿಯ ಸುರಕ್ಷತಾ ಕ್ರಮಗಳ ಅಳವಡಿಕೆ ಕಾರ್ಯ ಕೂಡ ನಡೆಯಲಿದೆ.
ನವಮಂಗಳೂರು ಬಂದರು ಸಂಪರ್ಕಿಸುವ ಹೆದ್ದಾರಿಗಳ ನವೀಕರಣ ಹಾಗೂ ಸುರಕ್ಷತಾ ಕ್ರಮ ಅಳವಡಿಕೆ ಕಾರ್ಯವು ಅನುದಾನದ ಕೊರತೆಯಿಂದಾಗಿ ಬಹು ದಿನಗಳಿಂದ ಬಾಕಿಯಾಗಿತ್ತು. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಅವಿರತ ಪರಿಶ್ರಮದ ಫಲವಾಗಿ ಈ ಹೆದ್ದಾರಿಗಳಿಗೆ ಇದೀಗ ಕಾಯಕಲ್ಪ ದೊರೆಯುತ್ತಿದೆ.