ಉತ್ತರ ನೀಡಲು ಪಾಕಿಸ್ಥಾನ ಮಾಡುತ್ತಿದೆ ಭಾರಿ ಸಿದ್ಧತೆ
ಇಸ್ಲಾಮಾಬಾದ್ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಕೈಗೊಂಡ ದಿಟ್ಟ ದೊಡ್ಡ ಕ್ರಮಗಳಿಗೆ ತಾನು ಉತ್ತರ ನೀಡಲಿದ್ದೇನೆ ಎಂದು ಒಪಾಕಿಸ್ಥಾನ ಹೇಳಿದೆ.
ಒಂದೆಡೆ ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ನಿಲ್ಲಿಸುವ ಮೂಲಕ ಪಾಕಿಸ್ಥಾನಕ್ಕೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ, ಮತ್ತೊಂದೆಡೆ, ಪಾಕಿಸ್ಥಾನದ ರಾಯಭಾರ ಕಚೇರಿಯನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಾಕಿಸ್ಥಾನಿಗಳು 48 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ತುರ್ತು ಸಭೆ ಕರೆದಿದೆ.
ಭಾರತದ ಕ್ರಮಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಗುರುವಾರ ಸಭೆ ಸೇರಲಿದೆ ಎಂದು ಪಾಕಿಸ್ಥಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬುಧವಾರ ತಡರಾತ್ರಿ ತಿಳಿಸಿದ್ದಾರೆ. ಪ್ರಧಾನಿ ಶಹಬಾಜ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಡೆಯಲಿದೆ ಎಂದು ಆಸಿಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಕ್ರಮಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಈ ಸಭೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಎಲ್ಲ ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಪ್ರಮುಖ ಕ್ಯಾಬಿನೆಟ್ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಹಲ್ಗಾಮ್ ದಾಳಿಗೂ ಪಾಕಿಸ್ಥಾನಕ್ಕೂ ಸಂಬಂಧವಿಲ್ಲ ಎಂದು ಖ್ವಾಜಾ ಹೇಳಿದ್ದಾರೆ.
ಪಾಕಿಸ್ಥಾನದ ವಿದೇಶಾಂಗ ಸಚಿವಾಲಯವು ನೀಡಿರುವ ಪ್ರತಿಕ್ರಿಯೆಯಲ್ಲಿ, ಅನಂತನಾಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿದ ಬಗ್ಗೆ ನಮಗೆ ಬೇಸರವಿದೆ, ಮೃತರ ಕುಟುಂಬಗಳಿಗೆ ನಮ್ಮ ಸಂತಾಪ ಸೂಚಿಸುತ್ತೇವೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ ಎಂದು ಬರೆದಿದ್ದರು.
ಈ ನಡುವೆ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತವೇನಾದರೂ ಪಾಕಿಸ್ಥಾನದ ಮೇಲೆ ದಾಳಿ ಮಾಡಿದರೆ, ತನ್ನ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಸಚಿವೆ ಅಜ್ಮಾ ಬೊಖಾರಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವೆ, ಸುಳ್ಳು ಆರೋಪದ ಮೇಲೆ ಭಾರತ ನಡೆಸುವ ಯಾವುದೇ ದುಸ್ಸಾಹಸ ಭೀಕರ ಪರಿಣಾಮಗಳನ್ನು ಬೀರುತ್ತದೆ. ಕಳೆದ ಬಾರಿ ಅಭಿನಂದನ್ ವರ್ಧಮಾನ್ ಅವರಿಗೆ ಚಹಾ ನೀಡಿದ್ದೆವು. ಈ ಬಾರಿ ಅಷ್ಟು ಕನಿಕರ ತೋರುವುದಿಲ್ಲ. ಅತಿಥಿ ಒಮ್ಮೆ ಬಂದರೆ ಸಹನೀಯ. ಆದರೆ ಪ್ರತಿ ಬಾರಿ ಬಂದರೆ, ಪಾಕಿಸ್ಥಾನದ ಸೇನೆ, ಸರ್ಕಾರ ಮತ್ತು ಜನರು ಅವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.