ಐಸಿಸ್ ಕಾಶ್ಮೀರ ಖಾತೆಯಿಂದ ಐ ಕಿಲ್ ಯೂ ಎಂದು ಧಮ್ಕಿ
ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಐಸಿಸ್ ಕಾಶ್ಮೀರ ಎಂಬ ಖಾತೆಯಿಂದ ಕೊಲೆ ಬೆದರಿಕೆ ಬಂದಿದೆ. ಇ-ಮೇಲ್ ಮೂಲಕ ಜೀವ ಬೆದರಿಕೆಯೊಡ್ಡಲಾಗಿದ್ದು, ಈ ಬಗ್ಗೆ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ಗಂಭೀರ್ ದೂರು ನೀಡಿದ್ದಾರೆ.
ಗೌತಮ್ ಗಂಭೀರ್ ಬುಧವಾರ ದೆಹಲಿ ಪೊಲೀಸರನ್ನು ಸಂಪರ್ಕಿಸಿ, ಎಫ್‌ಐಆರ್ ದಾಖಲಿಸಿದ್ದಾರೆ. ಹಾಗೆಯೇ ತಮ್ಮ ಕುಟುಂಬದ ಭದ್ರತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ ಎಂದು ರಾಜೇಂದ್ರ ನಗರ ಠಾಣೆ ಅಧಿಕಾರಿ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಗಂಭೀರ್‌ಗೆ ಎರಡು ಬೆದರಿಕೆ ಇ-ಮೇಲ್‌ಗಳು ಬಂದಿದ್ದವು. ಒಂದು ಇಮೇಲ್ ಮಧ್ಯಾಹ್ನ ಮತ್ತು ಇನ್ನೊಂದು ಸಂಜೆ ಬಂದಿತ್ತು. ಎರಡೂ ಸಂದೇಶಗಳಲ್ಲೂ ಐ ಕಿಲ್ ಯು ಎಂದು ಬರೆಯಲಾಗಿತ್ತು. ಈ ಬೆದರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗೌತಮ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 2021ರಲ್ಲಿ ಆಗ ಬಿಜೆಪಿ ಸಂಸರಾಗಿದ್ದ ಗಂಭೀರ್‌ಗೆ ಇದೇ ರೀತಿಯ ಇಮೇಲ್ ಬಂದಿತ್ತು.
ಇದೀಗ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಐಸಿಸ್ ಕಾಶ್ಮೀರ ಖಾತೆಯ ಹೆಸರಿನಿಂದ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆಯ ಸಂದೇಶ ಬಂದಿದೆ. ಇದಕ್ಕೂ ಮುನ್ನ ಗೌತಮ್ ಗಂಭೀರ್ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.
ಮೃತರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತೇನೆ. ಇದಕ್ಕೆ ಕಾರಣರಾದವರು ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಪ್ರತೀಕಾರವಾಗಿ ಭಾರತ ತಿರುಗೇಟು ನೀಡಲಿದೆ ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಐಸಿಸ್ ಕಾಶ್ಮೀರ ಹೆಸರಿನ ಮೇಲ್ ಐಡಿಯಿಂದ ಗೌತಮ್ ಗಂಭೀರ್‌ಗೆ ಕೊಲೆ ಬೆದರಿಕೆಯೊಡ್ಡಲಾಗಿದೆ.