ಪುತ್ತೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಶ್ರದ್ಧಾಂಜಲಿ ಸಭೆ ಮತ್ತು ಪ್ರತಿಭಟನೆ ಬುಧವಾರ ಸಂಜೆ ಬಸ್ ನಿಲ್ದಾಣದ ಬಳಿ ಇರುವ ಗಾಂಧಿಕಟ್ಟೆಯಲ್ಲಿ ನಡೆಯಿತು.
ಪ್ರತಿಭಟನಾ ಸಭೆಯ ಮೊದಲು ನಗರದ ದರ್ಬೆ ವೃತ್ತದಿಂದ ದೊಂದಿಯೊಂದಿಗೆ ಬೃಹತ್ ಕಾಲ್ನಡಿಗೆ ಜಾಥಾ ಗಾಂಧಿಕಟ್ಟೆ ತನಕ ನಡೆಯಿತು. ಅಲ್ಲಿ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ವಿಶ್ವ ಹಿಂದೂ ಪರಿಷದ್ ನ ಕರ್ನಾಟಕ ಪ್ರಾಂತೀಯ ಉಪಾಧ್ಯಕ್ಷ ಯು.ಪೂವಪ್ಪ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡರು, ಕಾರ್ಯಕರ್ತರು ಸಹಿತ ಸಹಸ್ರಾರು ಹಿಂದೂಗಳು ಪಾಲ್ಗೊಂಡಿದ್ದರು.
